ಬಳ್ಳಾರಿ : ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ. ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ-ಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ, ಶೇ.33 ರಷ್ಟು ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ನಿಖರವಾಗಿ ನಮೂದಿಸಲಾಗಿಲ್ಲ. ಅಧಿಕಾರಿಗಳ ಇಂತಹ ನಡೆಯಿಂದ ರೈತರಿಗೆ ಅನ್ಯಾಯವಾಗಲಿದೆ” ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಎಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಬೇಕು. ಅಧಿಕಾರಿಗಳು ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ನಮೂದಿಸದಿದ್ದರೆ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ತಾಲ್ಲೂಕುಗಳ ತಹಶೀಲ್ದಾರರಿಗೆ ಹೇಳಿದರು.
ಮಳೆ ಇಲ್ಲದ ಕಾರಣ ರೈತರು ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಮುಂದಿನ ವಾರದ ಒಳಗಾಗಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ರೈತರ ಜಮೀನಿನ ನಿಖರ ಮಾಹಿತಿಯನ್ನು ನಮೂದಿಸಿ ಎಂದರು.