ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಮೊದಲಾದ ಕಾರಣಗಳಿಂದ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದ ಕೃಷಿ ಸಾಲ ವಿತರಿಸುವುದು ವಿಳಂಬವಾಗಿದೆ.
ಸಂಕಷ್ಟದಲ್ಲಿದ್ದ ಲಕ್ಷಾಂತರ ರೈತರು ಬರಗಾಲದ ನಡುವೆಯೂ ಏಪ್ರಿಲ್ ಅಂತ್ಯಕ್ಕೆ 2023 -24ನೇ ಸಾಲಿನ ಸಾಲ ಮರುಪಾವತಿಸಿದ್ದು, ಹೊಸ ಸಾಲದ ನಿರೀಕ್ಷೆಯಲ್ಲಿದ್ದಾರೆ. ಕೆಲವು ಸಹಕಾರ ಸಂಘಗಳಲ್ಲಿ ಮಾತ್ರ ಸಾಲ ವಿತರಿಸಲಾಗುತ್ತಿದೆ. ಉಳಿದ ಕಡೆ ಸಾಲ ನೀಡಲಾಗುತ್ತಿಲ್ಲ/ ಸರ್ಕಾರದ ಮಟ್ಟದಲ್ಲಿ ಮೇಲುಸ್ತುವಾರಿ ಗಮನಿಸಲು ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಬೆಳೆ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಉತ್ತಮ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಾಲದ ನಿರೀಕ್ಷೆಯಲ್ಲಿದ್ದಾರೆ.
ಮುಂಗಾರು ಪೂರ್ವ ಮಳೆ ಕೂಡ ಆಗುತ್ತಿದ್ದು, ರೈತರಿಗೆ ಬಿತ್ತನೆ ಇತರೆ ಕಾರ್ಯಕ್ಕೆ ಸಾಲ ಅಗತ್ಯವಾಗಿದೆ. ಬೀಜ, ಗೊಬ್ಬರ, ಮೊದಲಾದವುಯಗಳಿಗೆ ರೈತರಿಗೆ ಸಾಲ ಬೇಕಿದೆ. ಸಾಲ ವಿತರಿಸಲು ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರು ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗಿದೆ. ಜೂನ್ 6ರ ನಂತರ ರೈತರಿಗೆ ಸಾಲ ಸೌಲಭ್ಯ ಸಿಗುವ ಸಾಧ್ಯತೆ ಇದೆ. 5 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ಸಾಲ ಮಿತಿ ನಿಗದಿಪಡಿಸಲಾಗಿದೆ. ಆದರೆ, ಬಹುತೇಕ ಕಡೆ ರೈತರಿಗೆ ಗರಿಷ್ಠ ಸಾಲ ಸಿಗುತ್ತಿಲ್ಲ.