ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಗಳ ನಕಲಿ ಮೊಹರು ತಯಾರಿಸಿಕೊಂಡು ದಾಖಲೆ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಪ್ರಕರಣವನ್ನು ತಹಶೀಲ್ದಾರ್ ಹೆಚ್.ಜೆ. ರಶ್ಮಿ ಪತ್ತೆ ಮಾಡಿದ್ದಾರೆ.
ಅಧಿಕಾರಿಗಳ ತಂಡ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ವ್ಯಾಪ್ತಿಯ ಎಲ್. ಗುಡ್ಡೇಕೊಪ್ಪದ ರಾಜೇಂದ್ರ ಎಂಬುವರ ಮನೆ ಮೇಲೆ ಸೋಮವಾರ ದಾಳಿ ನಡೆಸಿದೆ. ಅಕ್ರಮ -ಸಕ್ರಮಕ್ಕೆ ಹಕ್ಕು ಪತ್ರ ಸೇರಿದಂತೆ ಅನೇಕ ನಕಲಿ ದಾಖಲೆಗಳನ್ನು ತಯಾರಿಸುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ನೂರಾರು ನಕಲಿ ಹಕ್ಕು ಪತ್ರ ಹಾಗೂ ಹಕ್ಕು ಪತ್ರ ಮುದ್ರಿಸುವ ಕಾಗದ, ಸರ್ಕಾರದ ನಕಲಿ ದಾಖಲೆ ಸಿಕ್ಕಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮನೆಯಿಂದ ವಶಪಡಿಸಿಕೊಂಡ ದಾಖಲೆಗಳಲ್ಲಿ ವಿವಿಧ ಬ್ಯಾಂಕುಗಳು, ಉಪ ನೋಂದಣಾಧಿಕಾರಿ ಕಚೇರಿ, ತಹಶೀಲ್ದಾರ್, ತಾಲೂಕು ಕಚೇರಿ, ವಲಯ ಅರಣ್ಯ ಅಧಿಕಾರಿ, ನ್ಯಾಯಾಲಯ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ಹೆಸರಿನಲ್ಲಿರುವ 48 ನಕಲಿ ಸೀಲ್ ಪತ್ತೆಯಾಗಿವೆ. ಈ ಹಿಂದೆ ಹೊಸನಗರದಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ತಹಶೀಲ್ದಾರ್ ಗಳ ಮಾದರಿ ಸಹಿ ಪತ್ತೆಯಾಗಿದೆ. ಅಲ್ಲದೆ, ನೈಜತಾ ಪ್ರಮಾಣ ಪತ್ರದ ನಕಲಿ ದಾಖಲೆಯೂ ಕಂಡುಬಂದಿವೆ. ಆರೋಪಿ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಂದ ಪ್ರತಿ ಹಕ್ಕುಪತ್ರಕ್ಕೆ 25000 ರೂ. ಪಡೆಯುತ್ತಿದ್ದ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ದಾಳಿಯಲ್ಲಿ ಪಿಎಸ್ಐ ಶಂಕರ್ ಗೌಡ ಪಾಟೀಲ್, ಕಂದಾಯ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಆಂಜನೇಯ, ಗ್ರಾಮ ಲೆಕ್ಕಾಧಿಕಾರಿ ರೇಣುಕಯ್ಯ, ಚಿರಾಗ್, ನಾಗಪ್ಪ, ಅಮ್ಜದ್ ಖಾನ್, ಶಿವಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.