ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಆರನೇ ಬಾರಿಗೆ ದೇಶದ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಫೆಬ್ರವರಿ 1 ರಂದು ಈ ಬಾರಿಯ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಈ ಆಯವ್ಯಯದೊಂದಿಗೆ ನಿರ್ಮಲಾ ಸೀತಾರಾಮನ್ ಹಲವು ದಾಖಲೆಗಳಿಗೂ ಪಾತ್ರರಾಗಲಿದ್ದಾರೆ. ಸತತ 5 ಪೂರ್ಣ ಬಜೆಟ್ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ಸರಿಗಟ್ಟಲಿದ್ದಾರೆ. ಅಷ್ಟೇ ಅಲ್ಲ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ.
ಐದು ಪೂರ್ಣ ಬಜೆಟ್ ಮಂಡಿಸಿ ದೇಶದ ಆರ್ಥಿಕತೆಯ ಚುಕ್ಕಾಣಿ ಹಿಡಿದಿರುವ ನಿರ್ಮಲಾ ಸೀತಾರಾಮನ್ ಅವರಿಗೆ ರಾಜಕೀಯ ಹಿನ್ನೆಲೆಯೇನೂ ಇಲ್ಲ. ಅವರು ರಾಜಕೀಯ ಕುಟುಂಬದಿಂದ ಬಂದವರಲ್ಲ. ತಮಿಳುನಾಡಿನ ಸಾಮಾನ್ಯ ಕುಟುಂಬದಿಂದ ಬಂದ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಅಲ್ಪಸಮಯದಲ್ಲೇ ದೇಶದ ವಿತ್ತ ಸಚಿವೆಯ ಸ್ಥಾನವನ್ನು ಗಳಿಸಿದರು.
ತಮಿಳುನಾಡಿನ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ 1959ರ ಆಗಸ್ಟ್18ರಂದು ನಿರ್ಮಲಾ ಸೀತಾರಾಮನ್ ಜನಿಸಿದರು. ತಂದೆ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪದೇ ಪದೇ ವರ್ಗಾವಣೆಯಾಗುತ್ತಿತ್ತು. ತಮಿಳುನಾಡಿನಲ್ಲೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಿರ್ಮಲಾ ಸೀತಾರಾಮನ್ ಸ್ನಾತಕೋತ್ತರ ಪದವಿಗಾಗಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡರು. ಅವರು ಇಂಡೋ-ಯುರೋಪಿಯನ್ ಜವಳಿ ವ್ಯಾಪಾರದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದ್ದಾರೆ.
ಅಧ್ಯಯನದ ಸಮಯದಲ್ಲೂ ಓದನ್ನು ಮುಂದುವರಿಸಿದ್ದು ವಿಶೇಷ. ಪತಿ ಅಧ್ಯಯನಕ್ಕಾಗಿ ಲಂಡನ್‌ಗೆ ಹೋದಾಗ ನಿರ್ಮಲಾ ಕೂಡ ಅವರೊಂದಿಗೆ ಹೋಗಿದ್ದರು. ಈ ಸಮಯದಲ್ಲಿ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದರು. ನಂತರ ಅವರು ಲಂಡನ್‌ನ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಪ್ರೈಸ್ ವಾಟರ್ ಹೌಸ್ ಹೆಸರಿನ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು. ಭಾರತಕ್ಕೆ ಹಿಂದಿರುಗಿದ ಬಳಿಕ ಹೈದರಾಬಾದ್‌ನ ಸಾರ್ವಜನಿಕ ನೀತಿ ಕೇಂದ್ರದಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡಿದರು.
ನಿರ್ಮಲಾ ಸೀತಾರಾಮನ್ ಅವರ ಅತ್ತೆ ಮತ್ತು ಮಾವ ಕಾಂಗ್ರೆಸ್ ನಾಯಕರು. ಆದರೆ ಎಂದಿಗೂ ತಮ್ಮ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರಲಿಲ್ಲ. ಅತ್ತೆಗೆ ಕಾಂಗ್ರೆಸ್ ಹಿನ್ನೆಲೆ ಇದ್ದರೂ ನಿರ್ಮಲಾ ಸೀತಾರಾಮನ್ 2008ರಲ್ಲಿ ಬಿಜೆಪಿ ಸೇರಿದರು. ಅವರನ್ನು ಪಕ್ಷದ ವಕ್ತಾರರನ್ನಾಗಿ ಮಾಡಲಾಯಿತು.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಮೋದಿ ಸರ್ಕಾರದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿತು. 2016 ರಲ್ಲಿ ಸಂಪುಟ ವಿಸ್ತರಣೆಯಲ್ಲಿ ಅವರು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಜವಾಬ್ದಾರಿಯನ್ನು ಪಡೆದರು.
2017ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ, ರಕ್ಷಣಾ ಸಚಿವೆಯ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿತ್ತು. 2019ರಲ್ಲಿ ಅವರಿಗೆ ಪೂರ್ಣಾವಧಿಯ ಹಣಕಾಸು ಸಚಿವರ ಜವಾಬ್ದಾರಿಯನ್ನು ನೀಡಲಾಯಿತು. ಕ್ಯಾಬಿನೆಟ್ ಸಚಿವರಾಗಿ ನಿರ್ಮಲಾ ಸೀತಾರಾಮನ್ ಪ್ರತಿ ತಿಂಗಳು 1,00,000 ರೂಪಾಯಿ ಮೂಲ ವೇತನವನ್ನು ಪಡೆಯುತ್ತಾರೆ.
ಇದಲ್ಲದೇ ಕ್ಷೇತ್ರ ಭತ್ಯೆ 70 ಸಾವಿರ, ಅಧಿಕೃತ ಭತ್ಯೆ 60 ಸಾವಿರ, ಆತಿಥ್ಯ ಭತ್ಯೆ 2 ಸಾವಿರ ರೂಪಾಯಿ, ಬಂಗಲೆ, ಸಿಬ್ಬಂದಿ, ಕಾರು ಹೀಗೆ ಎಲ್ಲ ಸೌಲಭ್ಯಗಳೂ ಇವೆ. ನಿರ್ಮಲಾ ಸೀತಾರಾಮನ್ ಅವರ ಬಳಿ 99,36,000 ಲಕ್ಷ ರೂಪಾಯಿ ಮೌಲ್ಯದ ಮನೆ ಮತ್ತು 16,02,000 ಲಕ್ಷ ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ ಇವೆ. ಇದಲ್ಲದೆ ಸ್ಕೂಟರ್, 7,87,500 ಲಕ್ಷ ಮೌಲ್ಯದ ಚಿನ್ನ, 80 ಸಾವಿರ ಮೌಲ್ಯದ ಬೆಳ್ಳಿ ಇದೆ. ಅಲ್ಪ ಸಮಯದಲ್ಲೇ ಬಿಜೆಪಿಯ ಬೆನ್ನೆಲುಬಾಗಿ ಗುರುತಿಸಿಕೊಂಡ ನಿರ್ಮಲಾ ಸೀತಾರಾಮನ್ ಅಲ್ಪ ಸಮಯದಲ್ಲಿ ಬಹಳ ಜನಪ್ರಿಯ ರಾಜಕಾರಣಿಯಾಗಿಯೂ ಹೆಸರು ಮಾಡಿದ್ದಾರೆ.