ನವದೆಹಲಿ: 29 ವರ್ಷದ ಜಿಮ್ ತರಬೇತುದಾರ ಗೌರವ್ ಸಿಂಘಾಲ್ ಅವರ ಮದುವೆಗೆ ಗಂಟೆಗಳ ಮೊದಲು ದಕ್ಷಿಣ ದೆಹಲಿಯ ಮನೆಯಲ್ಲಿ 15 ಬಾರಿ ಇರಿತಕ್ಕೊಳಗಾಗಿ ಕೊಲೆಯಾಗಿದ್ದಾರೆ.
ಗೌರವ್ ನನ್ನು ಆತನ ತಂದೆ ರಂಗ್ ಲಾಲ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಘಟನೆಯ ನಂತರ ನಾಪತ್ತೆಯಾಗಿದ್ದ ರಂಗ್ ಲಾಲ್ ನನ್ನು ಜೈಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ಪರಾರಿಯಾಗಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.
ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿದ್ದು, ಘಟನಾ ಸ್ಥಳವನ್ನು ತಲುಪಿದ ಅವರು ಗೌರವ್ ಸಿಂಘಾಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವುದನ್ನು ಕಂಡುಕೊಂಡರು. ಅವರ ಕುಟುಂಬದವರು ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದರು. ಮನೆಯೊಳಗೆ ರಕ್ತ ಕಂಡು ಬಂದಿದ್ದು, ಗೌರವ್ ಅವರ ದೇಹವನ್ನು ಮರೆ ಮಾಚಲು ಎಳೆದುಕೊಂಡು ಹೋಗಲಾಗಿದೆ.
ಗೌರವ್ ಅವರ ವಿವಾಹ ಸಮಾರಂಭವು ಎರಡು ದಿನದಲ್ಲಿ ನಡೆಯಬೇಕಿತ್ತು. ಇದು ನಿಯೋಜಿತ ಮದುವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಗೌರವ್ ಬೇರೆ ಹುಡುಗಿಯನ್ನು ಮದುವೆಯಾಗಲು ಬಯಸಿದ್ದ. ಕುಟುಂಬದ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಿದ್ದಾನೆ. ಈ ವಿಚಾರವಾಗಿ ಗೌರವ್ ತನ್ನ ತಂದೆಯೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಚೌಹಾಣ್ ಮಾತನಾಡಿ, ಗೌರವ್ ತಂದೆ ರಂಗ್ ಲಾಲ್ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 15 ಲಕ್ಷ ರೂಪಾಯಿ ನಗದು ಹಣದೊಂದಿಗೆ ಮನೆಯಿಂದ ಪರಾರಿಯಾಗಿದ್ದಾರೆ. ಗೌರವ್ ಜೊತೆ ರಂಗ್ ಲಾಲ್ ಜಗಳವಾಡಿದ್ದಾನೆ. ಈ ಸಂದರ್ಭದಲ್ಲಿ ಗೌರವ್ ತನ್ನ ತಂದೆಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ರಂಗಲಾಲ್ ತನ್ನ ಮೂವರು ಸಹಚರರೊಂದಿಗೆ ಸೇರಿ ಗೌರವ್ ನನ್ನು ಕೊಂದು ನಗದು ಮತ್ತು ಚಿನ್ನಾಭರಣದೊಂದಿಗೆ ಮನೆಯಿಂದ ಪರಾರಿಯಾಗಿದ್ದಾನೆ. ಕೊಲೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬಂದಿಲ್ಲ ಮತ್ತು ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.