ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎನ್ನಲಾಗಿದೆಯಾದರೂ ಕೆಲವು ಸಮೀಕ್ಷೆಗಳಲ್ಲಿ ಮತ್ತೆ ಅತಂತ್ರ ಫಲಿತಾಂಶ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಸರ್ಕಾರ ರಚನೆಯಾಗಲಿದೆಯಾ ಅನ್ನೋ ಕುತೂಹಲ ಕೂಡ ಇದೆ. ಈ ಮಧ್ಯೆ ಎಚ್‌ಡಿ ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾದಳ ಕಾಂಗ್ರೆಸ್ ಮತ್ತು ಬಿಜೆಪಿ ಕಡೆಯಿಂದ ಮೈತ್ರಿಗೆ ಆಹ್ವಾನ ಸಿಕ್ಕಿರುವುದಾಗಿ ಹೇಳಿದೆ.
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಹೀಗಾಗಿ ಯಾರೊಂದಿಗೆ ಪಾಲುದಾರರಾಗಬೇಕು ಎಂಬುದನ್ನು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕ ತನ್ವೀರ್ ಅಹ್ಮದ್ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸದ್ಯ ಹೆಚ್.ಡಿ. ಕುಮಾರಸ್ವಾಮಿ ಸಿಂಗಾಪೂರಕ್ಕೆ ತೆರಳಿದ್ದು ಸರಿಯಾದ ಸಮಯ ಬಂದಾಗ ನಾವು ಅದನ್ನು ಸಾರ್ವಜನಿಕರಿಗೆ ಘೋಷಿಸುತ್ತೇವೆ ಎಂದು ತನ್ವೀರ್ ಅಹ್ಮದ್ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ರಾಜ್ಯದ ಒಳಿತಿಗಾಗಿ ನಾವು ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ನಿಗಾ ಇಡಬೇಕೆಂದು ಕರ್ನಾಟಕದ ಜನರು ಬಯಸುತ್ತಾರೆ. ಮತ್ತು ಒಂದು ಪ್ರಾದೇಶಿಕ ಪಕ್ಷವಾಗಿ ಕರ್ನಾಟಕದ ಹಿತಕ್ಕಾಗಿ ಕೆಲಸ ಮಾಡುವುದನ್ನು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು. .
ಯಾವ ಪಕ್ಷದೊಂದಿಗೆ ಹೋಗುತ್ತೀರಿ ಎಂಬ ಪ್ರಶ್ನೆಗೆ, ‘ಕರ್ನಾಟಕ ಮತ್ತು ಕನ್ನಡಿಗರ ಅಭ್ಯುದಯಕ್ಕಾಗಿ ದುಡಿಯಲು ಹೊರಡುವವರ ಜೊತೆ’ ಎಂದರು.
ಆದರೆ ಬಿಜೆಪಿಯು ತಾನು ಜೆಡಿ (ಎಸ್) ಅನ್ನು ಸಂಪರ್ಕಿಸಿರುವುದನ್ನು ನಿರಾಕರಿಸಿದೆ ಮತ್ತು ಸ್ಪಷ್ಟ ಜನಾದೇಶದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.