ಬೆಂಗಳೂರು: ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯಿಂದ ತುರ್ತು ಸಭೆ ನಡೆಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಸಭೆಯ ಬಳಿಕ ಮಾಹಿತಿ ನೀಡಿದ ಸಚಿವರು, ಕಳೆದ ಒಂದು ತಿಂಗಳಿಂದ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ವೈರಲ್ ಫೀವರ್, ಐಎಲ್ಐ ಸಾರಿ ಪ್ರಕರಣಗಳು ಕಂಡು ಬಂದರೆ ಪರೀಕ್ಷೆ ಮಾಡಲಾಗುವುದು. ಕೋವಿಡ್ ಲಕ್ಷಣ, ಪ್ರಕರಣ ಕಂಡು ಬಂದರೆ ಪರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಮೂರು ತಿಂಗಳಿಗೆ ಅಗತ್ಯವಿರುವಷ್ಟು ಕೋವಿಡ್ ಟೆಸ್ಟ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದೆ. ಒಂದು ತಿಂಗಳ ಟೆಸ್ಟ್ ಮಾಡಲು 3 ಲಕ್ಷ ಆರ್.ಟಿ.ಪಿ.ಸಿ.ಆರ್. ಟೆಸ್ಟಿಂಗ್ ಕಿಟ್ ಅಗತ್ಯವಿದೆ. ಔಷಧ ಬೆಡ್ ವ್ಯವಸ್ಥೆ ಪರಿಶೀಲಿಸಲು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಗೆ ಸೂಚನೆ ನೀಡಲಾಗಿದೆ. ಡಿಸೆಂಬರ್ 19ರಂದು ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ರವಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.