ಬೆಂಗಳೂರು: ಸಹಕಾರ ಸಂಘಗಳ ನೌಕರರಿಗೆ ವಾರದಲ್ಲಿ ಸೇವಾ ಭದ್ರತೆ ಜಾರಿಗೊಳಿಸುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿ ಸೇರಿದಂತೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ವಾರದಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ ಇಲ್ಲ. ಆ ಸಂಘಗಳ ಆಡಳಿತ ಮಂಡಳಿಗಳ ಮರ್ಜಿಗೆ ಒಳಗಾಗಿ ಕೆಲಸ ಕಳೆದುಕೊಳ್ಳುವ ಪ್ರಸಂಗಗಳು ನಡೆಯುತ್ತವೆ. ಇದಕ್ಕಾಗಿ ಸಹಕಾರಿ ಕಾಯ್ದೆಗೆ 128 –ಎ ಗೆ ತಿದ್ದುಪಡಿ ತಂದಿದ್ದು, ಅಧಿವೇಶನದಲ್ಲಿ ಒಪ್ಪಿಗೆ ಪಡೆದು ಅಂತಿಮ ಹಂತದಲ್ಲಿದೆ. ಇದನ್ನು ಜಾರಿಗೊಳಿಸಿದ್ದಲ್ಲಿ ನೌಕರರು ಸೇವಾ ಭದ್ರತೆ ವ್ಯಾಪ್ತಿಗೆ ಬರಲಿದ್ದಾರೆ. ಈ ನೌಕರರ ಸೇವಾ ಭದ್ರತೆ ಅವಲೋಕನ ಮತ್ತು ಕುಂದು ಕೊರತೆ ನಿವಾರಣೆಗೆ ಕಾಮನ್ ಕೇಡರ್ ಅಥಾರಿಟಿ ಸಮಿತಿ ರಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.