ನವದೆಹಲಿ: ದೆಹಲಿಯಲ್ಲಿ ಇಂದು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ.
ಕಾನೂನು ಹೋರಾಟ ಮುಂದುವರಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸಲಹೆ ನೀಡಿದೆ. ಗ್ಯಾರಂಟಿಗಳನ್ನೇ ಅಸ್ತ್ರ ಮಾಡಿಕೊಳ್ಳಿ, ಗ್ಯಾರಂಟಿ ಸಹಿಸದೆ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ರಾಜ್ಯಪಾಲರ ನಡೆಯನ್ನು ಖಂಡಿಸಿ ಎಂದು ನಾಯಕರು ಸಲಹೆ ನೀಡಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಹಗರಣಗಳನ್ನು ಬಯಲಿಗೆಳೆಯಿರಿ. ಮುಲಾಜಿಲ್ಲದೆ ಬಿಜೆಪಿ, ಜೆಡಿಎಸ್ ಹಗರಣಗಳ ಬಗ್ಗೆ ಮಾತನಾಡಿ. ಬಿಜೆಪಿ ಏನೇ ಆರೋಪ ಮಾಡಲಿ ತಲೆಕೆಡಿಸಿಕೊಳ್ಳಬೇಡಿ. ಪ್ರಕರಣ ಈಗ ಕಾನೂನು ವ್ಯಾಪ್ತಿಗೆ ಬಂದಿದೆ. ಕಾನೂನು ಹೋರಾಟದ ಮೂಲಕವೇ ಸೂಕ್ತ ಉತ್ತರ ನೀಡಿ. ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಹೋರಾಟ ನಡೆಸಿ. ಕಾನೂನು ಹೋರಾಟವನ್ನು ಮುಂದುವರೆಸಿ. ವಿಪಕ್ಷಗಳ ವಿಚಾರದಲ್ಲಿ ಉಗ್ರವಾಗಿ ಹೋರಾಟ ನಡೆಸಿ ಎಂದು ಸಲಹೆ ನೀಡಲಾಗಿದೆ
ನಾನು ಹೈಕಮಾಂಡ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆಸಿದ ತಿಳಿಸಿದರು. ರಾಜ್ಯದ ಪರಿಸ್ಥಿತಿ ಬಗ್ಗೆ ಹೈಕಮಾಂಡ್ ಗೆ ವಿವರಣೆ ನೀಡಿದ್ದೇವೆ. ನಮಗೆ ಕೋರ್ಟ್ ನಲ್ಲಿ ನಂಬಿಕೆ ಇದೆ. ರಾಜ್ಯಪಾಲರ ನಡೆ ಅಸಂವಿಧಾನಿಕವಾಗಿದೆ ಎಂದು ಹೇಳಿದ್ದಾರೆ.