4 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕ್ರಮ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಲಾಖೆಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದು, ಯೋಜನೆಗಳು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮುಖ್ಯಮಂತ್ರಿ  ಸಿದ್ದರಾಮಯ್ಯ  ಅವರ ಅಧ್ಯಕ್ಷತೆಯಲ್ಲಿ  ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಸಭೆ ನಡೆಯಿತು. ಸಭೆಯಲ್ಲಿ ಚರ್ಚಿಸಲ್ಪಟ್ಟ ಪ್ರಮುಖ ಅಂಶಗಳು.

ಶಕ್ತಿ ಯೋಜನೆ:

ಶಕ್ತಿ ಯೋಜನೆ ಜಾರಿಯಾದಾಗಿನಿಂದ ನವೆಂಬರ್‌ 21ರ ವರೆಗೆ ಒಟ್ಟಾರೆ 99.75 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಂಡಿರುತ್ತಾರೆ. ಇನ್ನೆರಡು ದಿನಗಳಲ್ಲಿ ನೂರು ಕೋಟಿ ದಾಟಲಿದೆ. ತಿಂಗಳ ಸರಾಸರಿ ಪ್ರಯಾಣಿಕರ ಸಂಖ್ಯೆ ಏಪ್ರಿಲ್‌ 2023 ರಲ್ಲಿ 84.17 ಲಕ್ಷ ಇದ್ದು, ಶಕ್ತಿ ಯೋಜನೆ ಜಾರಿಯ ನಂತರ 1.08 ಕೋಟಿಯಿಂದ 1.15 ಕೋಟಿ ವರೆಗೆ ಹೆಚ್ಚಳವಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಒಟ್ಟು 828 ಸಾಮಾನ್ಯ ಹಾಗೂ 145 ವಿದ್ಯುತ್‌ ಚಾಲಿತ  ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಬಸ್‌ಗಳ ಖರೀದಿ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅನ್ನಭಾಗ್ಯ:

ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್‌ ತಿಂಗಳಲ್ಲಿ 1,10,96,413 ಕಾರ್ಡುದಾರರಿಗೆ ಡಿಬಿಟಿ ಮಾಡಲಾಗಿದೆ. ಈ ವರೆಗೆ ಒಟ್ಟು 2,444.11 ಕೋಟಿ ರೂ. ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. 12.95 ಲಕ್ಷ ಚೀಟಿದಾರರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡುವ ಮೂಲಕ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. 2.60  ಲಕ್ಷ ಹೊಸ ಖಾತೆಗಳನ್ನು ಅಂಚೆ ಕಚೇರಿಗಳಲ್ಲಿ ತೆರೆಯಲಾಗಿದೆ. 7.67 ಲಕ್ಷ ಅನರ್ಹ ಪಡಿತರ ಚೀಟಿಗಳ ವಿಷಯದಲ್ಲಿ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಆಗಿರುವುದರಿಂದ, ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸುವ ಕುರಿತಂತೆ ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚಿಸಲಾಗಿದೆ. ಡಿಸೆಂಬರ್‌ 31 ರೊಳಗೆ ಎಲ್ಲ ಅರ್ಹರಿಗೆ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು.

ಗೃಹ ಜ್ಯೋತಿ:

ಗೃಹಜ್ಯೋತಿ ಯೋಜನೆಯಡಿ ಈ ವರೆಗೆ 1.62 ಕೋಟಿ ಜನ ನೋಂದಾಯಿಸಿಕೊಂಡಿದ್ದು, 1.50 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತಿದೆ. ಆಗಸ್ಟ್‌ ನಿಂದ ಈ ವರೆಗೆ 2,900 ಕೋಟಿ ರೂ. ಭರಿಸಲಾಗಿದೆ.  ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಇಲಾಖೆಯ ದತ್ತಾಂಶದಲ್ಲಿಯೇ ಗೃಹಜ್ಯೋತಿ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ. ಈ ಫಲಾನುಭವಿಗಳು ಯಾರೂ ಗೃಹ ಜ್ಯೋತಿಯಿಂದ ಬಿಟ್ಟು ಹೋಗದಂತೆ ಕ್ರಮ ವಹಿಸಬೇಕು.

ಗೃಹಲಕ್ಷ್ಮಿ ಯೋಜನೆ:

ನವೆಂಬರ್‌ ತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1.10 ಕೋಟಿ  ಫಲಾನುಭವಿಗಳಿಗೆ ನೆರವು ವರ್ಗಾವಣೆ ಮಾಡಲಾಗಿದೆ. 2 ಲಕ್ಷ ಫಲಾನುಭವಿಗಳಿಗೆ ಸಂಬಂಧಿಸಿದ ತೊಡಕು ನಿವಾರಿಸಲಾಗುತ್ತಿದೆ. ಖಾತೆಯ ಮಾಹಿತಿಯಲ್ಲಿ ಗೊಂದಲ, ಆಧಾರ್‌ ಲಿಂಕ್‌ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆಗೆ ತೊಡಕಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಬ್ಯಾಂಕಿಗೇ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ, ಎಲ್ಲ ಅರ್ಹ ಫಲಾನುಭವಿಗಳಿಗೆ ನೆರವು ನೀಡಲು ಕ್ರಮ ಕೈಗೊಳ್ಳಬೇಕು.

ಗೃಹಲಕ್ಷ್ಮಿ  ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅಥವಾ ಬ್ಯಾಂಕ್‌ ಖಾತೆ ಆಧಾರ್‌ ಲಿಂಕ್‌ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಅದಾಲತ್‌ ಆಯೋಜಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read