ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೋಮವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶಿವಜ್ಞಾನ್ ಮೋತಿಲಾಲ್-ಎಸ್‌ಜಿಎಂಎಲ್ ಕಣ್ಣಿನ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುತ್ತಿದ್ದರು.
ಬಡವರು ಚಿಕಿತ್ಸೆಗಾಗಿ ಅಲೆದಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ದೇಶದಲ್ಲಿ 22 ಹೊಸ ಏಮ್ಸ್ ಸ್ಥಾಪಿಸಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಶೇ.55 ರಷ್ಟು ಹೆಚ್ಚಿಸಿದೆ. ಈ ಹಿಂದೆ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದರೆ ಈಗ 596 ಕಾಲೇಜುಗಳಿವೆ. ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 51 ಸಾವಿರದಿಂದ 89 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪಿಜಿ ಸೀಟುಗಳ ಸಂಖ್ಯೆಯೂ 31 ಸಾವಿರದಿಂದ 60 ಸಾವಿರಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಉಲ್ಲೇಖಿಸಿದ ಕೇಂದ್ರ ಗೃಹ ಸಚಿವರು, ಈ ಯೋಜನೆಯ ಮೂಲಕ 80 ಕೋಟಿ ಬಡವರು 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.