ಬೆಂಗಳೂರು : ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.
ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ. ಕಳೆದ ಬಾರಿ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು, ಇದೀಗ 70 ಶಾಲೆಗಳಿಗೆ ಬೆದರಿಕೆ ಬಂದಿದ್ದು, ಇಡೀ ಬೆಂಗಳೂರು ಬೆಚ್ಚಿಬಿದ್ದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ವಿಶೇಷ ತಂಡ ರಚಿಸಲು ಸೂಚನೆ ನೀಡಿತ್ತು. ಅಲ್ಲದೇ ಪ್ರಕರಣದ ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ನೀಡಿದ್ದರು.
ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಶಾಲಾ ಆಡಳಿತ ಮಂಡಳಿ ಎಫ್ ಐ ಆರ್ ದಾಖಲಿಸಿದ್ದು, ಪ್ರತ್ಯೇಕ 48 ಎಫ್ ಐ ಆರ್ ದಾಖಲಾಗಿದೆ.ಈ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಶಾಲೆಗಳು ಮತ್ತು ದೇವಾಲಯಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ ನೀಡಿದ್ದೇನೆ.ನಾಡಿನ ಜನರಿಗೆ ಸುರಕ್ಷಿತ ವಾತಾವರಣ, ನೆಮ್ಮದಿಯ ಬದುಕು ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ.ವಿದ್ವಂಸಕ ಕೃತ್ಯದ ಬೆದರಿಕೆ ಒಡ್ಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವುದು, ಸಾರ್ವಜನಿಕರ ನೆಮ್ಮದಿ ಕದಡುವುದು ಇಂತಹಾ ಯಾವುದೇ ದುಷ್ಟ ಆಲೋಚನೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.