ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಳೆದ 40 ವರ್ಷಗಳ ಇತಿಹಾಸದಲ್ಲಿಯೇ ಈ ರೀತಿ ಆಗಿರಲಿಲ್ಲ. ಕಾಂಗ್ರೆಸ್ ನಾಯಕರು ಸ್ವೇಚ್ಛಾಚಾರವಾಗಿ, ಅಧಿಕಾರಿಗಳ ನಿಯಮಗಳನ್ನು ಗಾಳಿಗೆ ತೂರಿ ಅವರನ್ನು ವಿಪಕ್ಷಗಳ ಸಭೆಗೆ ಬಳಸಿಕೊಂಡಿದ್ದಾರೆ. ಇದು ಖಂಡನೀಯ ಎಂದು ಗುಡುಗಿದರು.
ಹಲವಾರು ರಾಜ್ಯಗಳಿಂದ ಬಂದಿರುವ ಮುಖ್ಯಮಂತ್ರಿಗಳ ಹೊರತಾಗಿ ಬೇರೆ ಬೇರೆ ನಾಯಕರ ಬಾಗಿಲು ಕಾಯುವ ಕೆಲಸಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಇದು ಸರಿಯಲ್ಲ. ಅಧಿಕಾರಿಗಳನ್ನು ಪಕ್ಷದ ಕಾರ್ಯಕರ್ತರಂತೆ ನೋಡುತ್ತಿದ್ದಾರೆ. ಖಾಸಗಿ ಕಾರ್ಯಕ್ರಮ, ಪಕ್ಷಗಳ ಕಾರ್ಯಕ್ರಮಕ್ಕೆ ಸರ್ಕಾರದ ಉನ್ನತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು. ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಕಿಡಿಕಾರಿದ್ದಾರೆ.