ಬೆಂಗಳೂರು: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆಗೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ 30 ಜನ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ನಿನ್ನೆ ಕರ್ಫ್ಯೂ ಇದ್ದರೂ ಕೂಡ ನಿಯಮ ಉಲ್ಲಂಘನೆ ಮಾಡಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಐಪಿಸಿ ಸೆಕ್ಷನ್ 141, 143, 290, 336 ಅಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನಿಯಮ ಉಲ್ಲಂಘಿಸಿದ ಎಲ್ಲರ ಮೇಲೂ ಕೇಸ್ ದಾಖಲಿಸಲಾಗಿದೆ. ಪಾದಯಾತ್ರೆ ಚಾಲನೆ ನೀಡಲು ವೇದಿಕೆ ಮೇಲೆ ಇದ್ದ ಎಲ್ಲಾ ನಾಯಕರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ನಿಯಮ ಜಾರಿಗೆ ತಂದಿದ್ದರೂ ವಿಪಕ್ಷದ ಸ್ಥಾನದಲ್ಲಿದ್ದವರು ಉದ್ದೇಶಪೂರ್ವಕವಾಗಿ ಪಾದಯಾತ್ರೆ ಹೆಸರಲ್ಲಿ ನಿಯಮ ಉಲ್ಲಂಘಿಸಿದ್ದೂ ಅಲ್ಲದೇ ಜನರ ಹಿತದ ಬಗ್ಗೆ ಬೇಜವಾಬ್ದಾರಿ ತೋರಿರುವುದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಅವರು ಎಷ್ಟೇ ದೊಡ್ಡ ಲೀಡರ್ ಆಗಿದ್ದರೂ ಸರಿ ನಿಯಮ ಉಲ್ಲಂಘಿಸಿದ್ದಕ್ಕೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.