ಬೆಂಗಳೂರು: ರಾಜ್ಯದಲ್ಲಿ ಗುಜರಾತ್ ನ ಅಮೂಲ್ ಮಾರಾಟ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ 3ನೇ ಸಂಚು ನಡೆದಿದೆ.
ಸಂಚು1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ
ಸಂಚು2: ಮೊಸರಿನ ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲ.
3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ʼ ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್ʼಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ.ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ʼನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ʼನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.