ಧಾರವಾಡ: ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವ್ಯಂಗ್ಯವಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ದಗಾಬಾಜಿ ಪ್ರಣಾಳಿಕೆ ಎಂದು ಟೀಕಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದ ಕುಂದಗೋಳದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿರುವ ಯೊಜನೆಗಳೇ ಇವೆ. ಕಾಂಗ್ರೆಸ್ ಇದಕ್ಕೂ ಮೊದಲು ಗ್ಯಾರೆಂಟಿ ಕಾರ್ಡ್ ನೀಡಿದ್ದಾರೆ. 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಕೋವಿಡ್ ನಂತರ ನಾವು ಈಗಾಗಲೇ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಮೋದಿ ಅಕ್ಕಿಗೆ ತಮ್ಮ ಗೋಣಿ ಚೀಲ ಹಾಕಿ ಅದಕ್ಕೆ ತಮ್ಮ ಫೋಟೊ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ನವರ ಗ್ಯಾರಂಟಿ ಘೋಷಣೆಗಳು ದಗಾಬಾಜಿ ಘೋಷಣೆಗಳಾಗಿವೆ ಎಂದು ಹೇಳಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನಾವು ಈಗಾಗಲೇ ಘೊಷಣೆ ಮಾಡಿದ್ದೇವೆ. ಅದನ್ನೇ ಬೇರೆ ಹೆಸರಲ್ಲಿ ಕಾಂಗ್ರೆಸ್ ನವರು ಘೋಷಣೆ ಮಾಡಿದ್ದಾರೆ. ಕಳಸಾ ಬಂಡೂರಿ 5 ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ನಾವು ಈಗಾಗಲೇ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಟಾಂಗ್ ನೀಡಿದರು.
ಬಿಜೆಪಿ ದೇಶಭಕ್ತಿ, ದೇಶದ ಅಭಿವೃದ್ಧಿ ಭದ್ರತೆಯ ಆಧಾರದಲ್ಲಿ ಮತ ಕೇಳುತ್ತಿದೆ. ಆದರೆ ಕಾಂಗ್ರೆಸ್ ದೇಶ ವಿರೋಧಿಗಳ ಜೊತೆ ಕೈ ಜೋಡಿಸಿ, ದೇಶ ವಿಭಜನೆ ಮಾಡುವ ಅಭಿವೃದ್ಧಿ ಶೂನ್ಯ ಉದ್ದೇಶದಲ್ಲಿ ಮತ ಕೇಳುತ್ತಿದೆ. ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ರಾಜ್ಯದ 54 ಲಕ್ಷ ರೈತರಿಗೆ ನೇರ ನಗದು ನೀಡಿದೆ.
ಕುಂದಗೊಳದಲ್ಲಿ 20 ಸಾವಿರ ರೈತರಿಗೆ ತಲುಪಿದೆ ಎಂದರು.