ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಉಳಿಸಿಕೊಂಡ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತೆರಿಗೆ ವಸೂಲಿ ಮಾಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಲ್ಲೇಶ್ವರದ ಐಪಿಪಿ ಸಭಾಂಗಣ ಕೊಠಡಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಹೆಚ್ಚು ಬಾಕಿ ಉಳಿಸಿಕೊಂಡ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವಲಯ ಸಹಾಯಕ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿವಾರು ಸಭೆ ನಡೆಸಿ ಪ್ರಕರಣಗಳ ಪಟ್ಟಿ ಅನುಸಾರ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಒಟಿಎಸ್ ಯೋಜನೆಯಡಿ ತೆರಿಗೆದಾರರಿಗೆ ಅನುಕೂಲ ಕಲ್ಪಿಸಲಾಗಿದೆ. ನವೆಂಬರ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 1ರಿಂದ ಪಾವತಿಸುವ ಆಸ್ತಿ ತೆರಿಗೆ ದುಪ್ಪಟ್ಟಾಗಲಿದೆ. ಈ ಬಗ್ಗೆ ಮನೆ ಮನೆಗೆ ತೆರಳಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ತಿಳಿಸಿದ್ದಾರೆ.