ಉಡುಪಿ : ಕಾರ್ಕಳ ತಾಲೂಕಿನ ಅಜೆಕಾರು ವ್ಯಾಪ್ತಿಯ ರೈತರಿಂದ ಭತ್ತದ ಸಸಿಗಳ ಒಣಗುವಿಕೆಯ ಕುರಿತು ಸಮಸ್ಯೆ ವರದಿಯಾದ ಹಿನ್ನೆಲೆ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿಯನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ತಡವಾಗಿ ಪ್ರಾರಂಭವಾದ ಮಳೆ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೇ ಇರುವುದರಿಂದ ಪ್ರಮುಖವಾಗಿ ಭತ್ತದ ಬೆಳೆ ಸೋತು ಸೊರಗುತ್ತಿರುತ್ತದೆ. ಗದ್ದೆಗಳಲ್ಲಿ ನೀರಿಲ್ಲದ ಕಾರಣ ಕಳೆಗಳು ಹಾಗೂ ನೀರಿನ ಸಮಸ್ಯೆಯಿಂದಾಗಿ ಮೇಲು ಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದುದರಿಂದ ಪೋಷಕಾಂಶಗಳ ಕೊರತೆ ಕಾಣುತ್ತಿದೆ.
ಮುಖ್ಯವಾಗಿ ಪೋಟಾಷ್ ಕೊರತೆಯಿಂದಾಗಿ ಭತ್ತದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಹೆಚ್ಚು ತೆಂಡೆಗಳು ಒಡೆಯದೇ ಒಣಗುವ ಸ್ಥಿತಿಯಲ್ಲಿರುತ್ತದೆ. ಹಡಿಲು ಭೂಮಿಯಲ್ಲಿರುವ ಸಹ್ಯಾದ್ರಿ ಬ್ರಹ್ಮ ತಳಿಯಲ್ಲಿ ಭತ್ತದ ಎಲೆಗಳು ಕೆಂಪಾಗುತ್ತಿರುವುದು ಹೆಚ್ಚಾಗಿ ಕಂಡುಬಂದಿದ್ದು, ಯಾವುದೇ ಕೀಟ ರೋಗದ ಭಾದೆ ಇರುವುದಿಲ್ಲ ಎಂಬ ಅಂಶಗಳನ್ನು ಗಮನಿಸಲಾಗಿರುತ್ತದೆ,
ಈ ಹಿನ್ನೆಲೆ, ನೀರೊದಗಿಸುವ ಸಾಧ್ಯತೆಯಿರುವ ಕಡೆ ಮಳೆಗಾಗಿ ಕಾಯದೇ ಕೂಡಲೇ ನೀರು ಒದಗಿಸುವುದು, ಭೂಮಿಯ ಫಲವತ್ತತೆ ಪರೀಕ್ಷೆ ಪ್ರತಿ ಮೂರು ವರ್ಷಕ್ಕೊಮ್ಮೆಯಾದರು ಮಾಡಿಸುವುದು, ನೀರು ಒದಗಿಸಿದ ಗದ್ದೆಗಳಿಗೆ ಯುರಿಯಾ 30 ಕೆ.ಜಿ ಹಾಗೂ ಎಂ.ಒ.ಪಿ 15 ಕಿ.ಗ್ರಾಂ ಪ್ರತಿ ಎಕರೆಗೆ ಮೇಲು ಗೊಬ್ಬರವಾಗಿ ನೀಡುವುದು ಹಾಗೂ ಗದ್ದೆಗಳಲ್ಲಿ ಕಳೆ ನಿಯಂತ್ರಣ ಮಾಡುವ ಮೂಲಕ ವೈಜ್ಷಾನಿಕ ಸಲಹೆಗಳನ್ನು ಅನುಸರಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.