ಶಿವಮೊಗ್ಗ: ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದೆಲ್ಲಾ ಚರ್ಚೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಮಾಜಿ ಸಿಎಂ ದಿ. ಎಸ್. ಬಂಗಾರಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರವಿಂದ ಲಿಂಬಾವಳಿ ಮಾತನಾಡಿ, ಬಂಗಾರಪ್ಪ ಬಿಜೆಪಿಗೆ ಬಂದ ಮೇಲೆ 84 ಸ್ಥಾನ ಬಂದವು. ಅಲ್ಲಿವರೆಗೂ 40- 45 ಸೀಟುಗಳಿದ್ದ ಬಿಜೆಪಿ 80 ಸ್ಥಾನಗಳನ್ನು ಗಳಿಸುವಂತಾಯಿತು ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದರು. ಹಾಗಾಗಿ ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಬಂಗಾರಪ್ಪ ಬಿಜೆಪಿ ಬಿಟ್ಟರು ಎಂದು ಲಿಂಬಾವಳಿ ಹೇಳಿದ್ದಾರೆ.
ಆರಾಧನಾ ಯೋಜನೆ ಜಾರಿಗೆ ತಂದವರು ಎಸ್. ಬಂಗಾರಪ್ಪ, ಅವರು ಶಾಲೆಯಲ್ಲಿ ಹಾಜರಾತಿ ಹೆಚ್ಚಳಕ್ಕೆ ಮಕ್ಕಳಿಗೆ ಒಂದು ರೂಪಾಯಿ ನೀಡಿದರು. ಸಮಾಜದಲ್ಲಿ ಹಿಂದುಳಿದವರ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರು. ಕಾವೇರಿ ನದಿಯ ವಿಷಯದಲ್ಲಿ ಗಂಡಸ್ತನ ತೋರಿಸಿದ್ದು ಬಂಗಾರಪ್ಪ. ಅಂತಹ ಎದೆಗಾರಿಕೆ ಬಂಗಾರಪ್ಪನವರಿಗೆ ಇತ್ತು ಎಂದರು.
ಸೊರಬದಲ್ಲಿ ಮಧು ಹೆಸರಿನಲ್ಲಿರುವ ರಸ್ತೆ ಬದಿಯ ಆಸ್ತಿಯಲ್ಲಿ ಬಂಗಾರಪ್ಪನವರ ಸಮಾಧಿ ಕಟ್ಟಿ ಸ್ಮಾರಕ ನಿರ್ಮಿಸಲಾಗಿದೆ. ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ ನಯಾಪೈಸೆ ಪಡೆದಿಲ್ಲ. ಶಿವಮೊಗ್ಗದಲ್ಲಿ ರಸ್ತೆ ಬದಿ ಯಾರ ಯಾರ ಆಸ್ತಿ ಇದೆ ಎಂದು ನಿಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ, ಈಶ್ವರಪ್ಪ ಆಸ್ತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಲಿಂಬಾವಳಿ ಬಿಜೆಪಿಯಿಂದ ದೂರವಾಗ್ತಾರಾ ಎಂದೆಲ್ಲಾ ಚರ್ಚೆ ನಡೆದಿದೆ.