ಊಟ-ಉಪಹಾರ ಎಲ್ಲವೂ ಟೇಸ್ಟಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಇದಕ್ಕಾಗಿ ನಾವು ಬಗೆಬಗೆಯ ಸಾಸ್‌ಗಳು, ಮೇಯೋನೀಸ್, ಜಾಮ್, ಪೀನಟ್ ಬಟರ್ ಇವನ್ನೆಲ್ಲ ಬಳಸ್ತೇವೆ. ಇವುಗಳಲ್ಲಿ ಬಹುತೇಕ ಸ್ಪ್ರೆಡ್‌ಗಳು ರೆಡಿಮೇಡ್. ಪ್ರಿಸರ್ವೇಟಿವ್ಸ್ ಬಳಸಿ ಮಾಡಲಾಗುತ್ತದೆ. ಈ ಡಿಪ್‌ಗಳ ಬದಲು ಪ್ರಿಸರ್ವೇಟಿವ್ಸ್ ಇಲ್ಲದೆ ಮನೆಯಲ್ಲಿಯೇ ತಯಾರಿಸಿದ ಕ್ಯಾರೆಟ್ ಸ್ಪ್ರೆಡ್ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ತಯಾರಿಸುವುದು ಕೂಡ ಬಹಳ ಸುಲಭ.
ಬೇಕಾಗುವ ಸಾಮಗ್ರಿ: 2 ಕ್ಯಾರೆಟ್, 1 ಕಪ್ ಕಿತ್ತಳೆ ರಸ, ಶುಂಠಿ, 1/2 ಟೀಸ್ಪೂನ್ ಬ್ಲಾಕ್ ಸಾಲ್ಟ್, ಉಪ್ಪು, 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 2 ಚಮಚ ಬೆಣ್ಣೆ, 1 ಟೀ ಚಮಚ ಹುರಿದ ಜೀರಿಗೆ
ಕ್ಯಾರೆಟ್ ಸ್ಪ್ರೆಡ್ ತಯಾರಿಸುವ ವಿಧಾನ: ಕ್ಯಾರೆಟ್ ಅನ್ನು ದುಂಡಗಿನ ಆಕಾರದಲ್ಲಿ ಕತ್ತರಿಸಿ ಬಾಣಲೆಯಲ್ಲಿ ಹಾಕಿ. ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಅರ್ಧ ಕಿತ್ತಳೆ ಹಿಂಡಿ ಫಿಲ್ಟರ್ ಮಾಡಿ. ಕ್ಯಾರೆಟ್ ಹಾಗೂ ಕಿತ್ತಳೆ ರಸವನ್ನು ಪ್ಯಾನ್‌ನಲ್ಲಿ ಹಾಕಿ ಬೇಯಿಸಿ. ಅದಕ್ಕೆ ಸ್ವಲ್ಪ ಶುಂಠಿ, ಬ್ಲಾಕ್ ಸಾಲ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಮೆಣಸಿನ ಪುಡಿಯನ್ನು ಹಾಕಿ 20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಕ್ಯಾರೆಟ್ ಚೆನ್ನಾಗಿ ಬೆಂದ ಬಳಿಕ ಬೆಣ್ಣೆ ಮತ್ತು ಹುರಿದ ಜೀರಿಗೆ ಸೇರಿಸಿ, ಅವುಗಳನ್ನು ಚೆನ್ನಾಗಿ ಟೋಸ್ಟ್ ಮಾಡಿ. ಬಾಣೆಲೆಯಿಂದ ಇಳಿಸಿ ಅದು ತಣ್ಣಗಾದ ಬಳಿಕ ಮಿಕ್ಸಿ ಮಾಡಿದರೆ ರುಚಿಕರ ಕ್ಯಾರೆಟ್ ಸ್ಪ್ರೆಡ್ ರೆಡಿಯಾಗುತ್ತದೆ.
ನಿಮಗೆ ಇಷ್ಟವಿದ್ದಲ್ಲಿ ಕಾಳುಮೆಣಸಿನ ಪುಡಿ, ಗರಂ ಮಸಾಲಾ ಕೂಡ ಸೇರಿಸಬಹುದು. ಕ್ಯಾರೆಟ್ ಸ್ಪ್ರೆಡ್ ತುಂಬಾ ಗಾಢವಾಗಿರಬಾರದು, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬಹುದು. ಕ್ಯಾರೆಟ್ ಸ್ಪ್ರೆಡ್‌ನ ತಾಜಾತನವನ್ನು ಕಾಪಾಡಿಕೊಳ್ಳಲು ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ.
ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಮೂಳೆಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಕೊಬ್ಬು ಮತ್ತು ಕ್ಯಾಲೋರಿ ಕಡಿಮೆ ಇರುವುದರಿಂದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿದ್ದು, ಇದು ದೇಹವನ್ನು ಹಾನಿಕಾರಕ ಅಂಶಗಳಿಂದ ರಕ್ಷಿಸುತ್ತದೆ.