ಫೆಬ್ರವರಿ 1, 2ರಂದು ಹಸಿರು ಧೂಮಕೇತು ಭೂಮಿಯ ಸಮೀಪಕ್ಕೆ ಬರಲಿದ್ದು, ಬೆಳಗಿನ ಜಾವ ಬರಿಗಣ್ಣಿನಲ್ಲಿ ನೋಡಬಹುದು ಎಂದು ತಜ್ಞರು ಹೇಳಿದ್ದಾರೆ.
ಸುಮಾರು 50 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯ ಸಮೀಪಕ್ಕೆ ಬಂದಿದ್ದ ಧೂಮಕೇತು ಈಗ ಮತ್ತೆ ಅತಿ ಸಮೀಪಕ್ಕೆ ಬರುತ್ತದೆ. ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಧೂಮಕೇತುವನ್ನು ಬೈನಾಕ್ಯುಲರ್, ದೂರದರ್ಶಕ, ಬರಿಗಣ್ಣಿನಲ್ಲಿಯೂ ನೋಡಬಹುದು. ಜನವರಿ 29 ರ ಬೆಳಗಿನಜಾವ ಉತ್ತರ ನಕ್ಷತ್ರದ ಸಮೀಪ ಧೂಮಕೇತು ಕಾಣಿಸುತ್ತದೆ. ಸಪ್ತರ್ಷಿ ಮಂಡಲದ ಸಮೀಪ ಇದನ್ನು ಯಾವುದೇ ದೃಶ್ಯ ಉಪಕರಣಗಳ ಸಹಾಯವಿಲ್ಲದೆ ಬರಿಗಣ್ಣಿನಿಂದಲೇ ವೀಕ್ಷಿಸಬಹುದಾಗಿದೆ.
ಸೌರವ್ಯೂಹದ ಆಚೆಗಿನ ಊರ್ತ್ ಕ್ಲೌಡ್ ನಿಂದ ಹೊರಬಂದು ಭೂಮಿಯ ಸಮೀಪಕ್ಕೆ ಧೂಮಕೇತು ಬರುತ್ತಿದ್ದು, ಇದಕ್ಕೆ ಹಸಿರು ಧೂಮಕೇತು ಎಂದು ಕರೆಯಲಾಗಿದೆ. 16 ಕೋಟಿ ಕಿಲೋಮೀಟರ್ ದೂರವಿರುವ ಧೂಮಕೇತು ಫೆಬ್ರವರಿ 1 ಮತ್ತು 2 ರಂದು ಕೇವಲ 4 ಕೋಟಿ 20 ಲಕ್ಷ ಕಿಲೋಮೀಟರ್ ಸಮೀಪಕ್ಕೆ ಬರುತ್ತದೆ.
ಮತ್ತೊಮ್ಮೆ ಇಷ್ಟು ಹತ್ತಿರಕ್ಕೆ ಬರಲು 50,000 ವರ್ಷಗಳು ಬೇಕಾಗುತ್ತದೆ. ಈ ಅಪರೂಪದ ಪ್ರಕಾಶಮಾನ ಧೂಮಕೇತು ವೀಕ್ಷಿಸುವಂತೆ ಖಗೋಳ ವೀಕ್ಷಕರು ಹೇಳಿದ್ದಾರೆ.