ಕೊಪ್ಪಳ: ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ಬಂದಾಗಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಜನವೋ ಜನ. ಕುಳಿತುಕೊಳ್ಳಲು ಸೀಟು ಸಿಗುವುದಂತು ಬಿಡಿ, ಕಾಲಿಡಲೂ ಜಾಗವಿಲ್ಲದಷ್ಟು ಬಸ್ ರಶ್ ಆಗಿ ಸಾಗುತ್ತಿದೆ. ಈ ಮಧ್ಯೆ ವೃದ್ಧೆಯೊಬ್ಬರು ಬಸ್ ನಲ್ಲಿ ಜಾಗವಿಲ್ಲದೇ ತನ್ನ ಪುಟ್ಟ ಮೊಮ್ಮಗುವಿನೊಂದಿಗೆ ಬಸ್ ನ ಫುಟ್ ಬೋರ್ಡ್ ನಲ್ಲಿ ಕುಳಿತು ಪ್ರಯಾಣಿಸಿದ ಘಟನೆ ನಡೆದಿದೆ.
ಕೊಪ್ಪಳದಲ್ಲಿ ಈ ಘಟನೆ ನಡೆದಿದ್ದು, ಬಹುತೇಕ ಬಸ್ ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿದೆ. ಬೇರೆ ಮಾರ್ಗವಿಲ್ಲದೇ ವೃದ್ಧೆ ತನ್ನ ಮೊಮ್ಮಗುವನ್ನು ಕೈಯಲ್ಲಿ ಎತ್ತಿಕೊಂಡು ಬಸ್ ನ ಪುಟ್ ಬೋರ್ಡ್ ಮೇಲೆ ಕುಳಿತು ಸಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪ್ರಯಾಣಿಕರಿಗೆ ಕಿಂಚಿತ್ತಾದರೂ ಮಾನವಿಯತೇ ಬೇಡವೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಜಂಗುಳಿಯಿಂದ ತುಂಬಿದ್ದ ಬಸ್ ನಲ್ಲಿ ಕಾಲಿಡಲೂ ಜಾಗವಿಲ್ಲ, ಹೀಗಿರುವಾಗ ಬಸ್ ಒಳಗೆ ಹೋದರೆ ಮಗುವಿಗೆ ಉಸಿರಾಡುವುದೂ ಕಷ್ಟ, ಮಗು ಕೈಲಿ ಹಿಡಿದು ನಿಂತು ಪ್ರಯಾಣಿಸುವುದೂ ಸಾಧ್ಯವಿಲ್ಲ. ಹೀಗಾಗಿ ಅಜ್ಜಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬಸ್ ನ ಮೆಟ್ಟಿಲುಗಳ ಮೇಲೆ ಕುಳಿತು ಸಾಗಿದ್ದಾರೆ. ಈ ರೀತಿ ಪ್ರಯಾಣಿಸುವಾಗ ಏನಾದರೂ ಹೆಚ್ಚು ಕಮ್ಮಿಯಾದರೆ ಏನುಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.