ಜೈನರ ಪವಿತ್ರ ಯಾತ್ರಾ ಸ್ಥಳವಾದ ಕುಂದಾದ್ರಿ ಬೆಟ್ಟ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ.
ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಇಲ್ಲಿಗೆ ಭಕ್ತರು ಮಾತ್ರವಲ್ಲ, ಪ್ರವಾಸಿಗರು, ಚಾರಣಿಗರು ಆಗಮಿಸುತ್ತಾರೆ.
ಬೆಟ್ಟದ ಮೇಲಿಂದ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುವುದೇ ಒಂದು ಸುಂದರ ಅನುಭವ. ಇಲ್ಲಿ ಕುಂದ ಮಹರ್ಷಿಗಳು ತಪಸ್ಸು ಮಾಡಿದ್ದ ಸ್ಥಳವಾದ್ದರಿಂದ ಇಲ್ಲಿಗೆ ಕುಂದಾದ್ರಿ ಎಂಬ ಹೆಸರು ಬಂದಿದೆ. ಕನ್ನಡದಲ್ಲಿ ಕುಂದ ಎಂಬ ಪದಕ್ಕೆ ಎತ್ತರವಾದ ಗೋಡೆ ಎಂಬ ಅರ್ಥವೂ ಇರುವುದರಿಂದ, ದೊಡ್ಡ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂದಿರಲೂಬಹುದು.
ಚಾರಣಿಗರ ನೆಚ್ಚಿನ ತಾಣವಾದ ಇಲ್ಲಿ ಕ್ಯಾಂಪ್ ಮಾಡಲು ಅವಕಾಶವಿದೆ. ತಂಗಲು ಇಲ್ಲಿ ಹೆಚ್ಚು ಅವಕಾಶಗಳಿಲ್ಲ, ಹಾಗಾಗಿ ಸಮೀಪದ ಆಗುಂಬೆ ಅಥವಾ ತೀರ್ಥಹಳ್ಳಿಯಲ್ಲಿ ಉಳಿಯಬಹುದು.