ಶಿಕ್ಷಣ ಇಲಾಖೆ ವತಿಯಿಂದ 1ರಿಂದ 8ನೇ ತರಗತಿ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿದ್ದು ಮಕ್ಕಳು ಯಾವುದನ್ನು ಬಯಸುತ್ತಾರೆ ಎಂಬ ಅಭಿಪ್ರಾಯ ಸಂಗ್ರಹದ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಶೇಕಡಾ 79 ಕ್ಕೂ ಅಧಿಕ ಮಕ್ಕಳು ಅಂದರೆ ಶೇ.79.98 ಮಕ್ಕಳು ಬೇಯಿಸಿದ ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ. ಒಟ್ಟು 47.97 ಲಕ್ಷ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ ವೇಳೆ ಈ ಅಂಶ ಕಂಡುಬಂದಿದೆ. ಇನ್ನು 2.27 ಲಕ್ಷ ಮಕ್ಕಳು ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ.
ಬೆಳಗಾವಿ ವಿಭಾಗದಿಂದ ಅತಿಹೆಚ್ಚಿನ ಮಕ್ಕಳು ಮೊಟ್ಟೆ ನೀಡುವಂತೆ ಬೇಡಿಕೆ ಇಟ್ಟಿದ್ದು, ನಂತರದ ಸ್ಥಾನದಲ್ಲಿ ಬೆಂಗಳೂರು, ಕಲಬುರಗಿ ಹಾಗೂ ಮೈಸೂರು ವಿಭಾಗಗಳು ಇವೆ ಎಂದು ಹೇಳಲಾಗಿದೆ. ಮಕ್ಕಳ ಬೇಡಿಕೆಗೆ ಅನುಗುಣವಾಗಿ ಪೌಷ್ಟಿಕ ಪದಾರ್ಥ ನೀಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದು, ಅಭಿಪ್ರಾಯ ಸಂಗ್ರಹಣದ ವೇಳೆ ಮೊಟ್ಟೆಗೆ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ.