ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಳುಹಿಸಿದ ಸಂದೇಶಗಳನ್ನು ಎರಡು ದಿನಗಳ ಬಳಿಕವೂ ಡಿಲೀಟ್ ಮಾಡಬಹುದಾದ ಸೌಲಭ್ಯ ಒದಗಿಸಿದ್ದು, ಈಗ ಮತ್ತಷ್ಟು ಹೊಸ ಸೇವೆಗಳನ್ನು ಸೇರ್ಪಡೆ ಮಾಡಿದೆ.
ಹೌದು, ಬಳಕೆದಾರರು ತಮ್ಮ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ವಾಟ್ಸಾಪ್ ನಿಂದ ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದ್ದು, ಮೊದಲನೆಯದಾಗಿ ಬಳಕೆದಾರರು ಗ್ರೂಪ್ ತೊರೆಯುವಾಗ ಇತರರಿಗೆ ಇದು ಅರಿವಾಗದಂತೆ ಹೊರ ಹೋಗಬಹುದಾಗಿದೆ.
ಅಲ್ಲದೆ, ಆನ್ಲೈನ್ ನಲ್ಲಿ ಇರುವಾಗ ಇದನ್ನು ಯಾರು ನೋಡಬಹುದು, ಯಾರು ನೋಡಬಾರದು ಎಂಬ ಅವಕಾಶವೂ ಬಳಕೆದಾರರಿಗೆ ಸಿಗಲಿದೆ. ಜೊತೆಗೆ ಒಮ್ಮೆ ಮಾತ್ರ ನೋಡಲಾಗುವಂತೆ ಕಳುಹಿಸುವ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳದಂತೆ ನಿಯಂತ್ರಿಸಬಹುದಾಗಿದೆ. ಅಲ್ಲದೆ ಮತ್ತಷ್ಟು ವಿಶಿಷ್ಟ ಸೇವೆಗಳನ್ನು ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ ಎಂದು ಹೇಳಲಾಗಿದೆ.