ಹಲಸಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಹಣ್ಣಿನ ವಾಸನೆ ಮೂಗಿಗೆ ಬಡಿದರೆ ಸಾಕು, ಹಣ್ಣು ತಿನ್ನುವ ಮನಸಾಗುತ್ತದೆ. ಹಣ್ಣಿನ ವಿಚಾರ ಇರಲಿ, ಹಲಸಿನ ಕಾಯಿಯಿಂದ ವಿಶೇಷ ತಿನಿಸೊಂದನ್ನು ಮಾಡಬಹುದಾಗಿದೆ. ಅದೇ ಹಲಸಿನ ಡ್ರೈ ಪಲ್ಯ. ಅದರ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು :
ಶುಚಿಗೊಳಿಸಿ ಕತ್ತರಿಸಿದ 500 ಗ್ರಾಂ ಹಲಸಿನ ಕಾಯಿ ಹೋಳು, 2 ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್, 4 ಚಮಚ ಕಡಲೆ ಹಿಟ್ಟು, 4 -5 ಈರುಳ್ಳಿ, ಅರ್ಧ ಸೌಟು ಎಳ್ಳೆಣ್ಣೆ, ರುಚಿಗೆ ತಕ್ಕಷ್ಟೇ ಉಪ್ಪು, ಖಾರ, ದನಿಯಾ ಪುಡಿ, ಗರಂ ಮಸಾಲಾ, 2 ಚಿಟಕಿ ಅರಿಶಿಣ, ಕರಿಯಲು ರೀಫೈಂಡ್ ಎಣ್ಣೆ, ಹುಣಸೆ ಹಣ್ಣು.
ತಯಾರಿಸುವ ವಿಧಾನ :
ಮೊದಲಿಗೆ ಹಲಸಿನ ಹೋಳನ್ನು ನೀರಿಲ್ಲದೇ ಕುಕ್ಕರ್ ಬಟ್ಟಲಿನಲ್ಲಿಟ್ಟು 1 ವಿಶಲ್ ಆಗುವವರೆಗೆ ಬೇಯಿಸಿ. ಬಳಿಕ ಅದನ್ನು ಹೊರಗೆ ತೆಗೆದು, ತಣ್ಣಗೆ ಆಗುವವರೆಗೂ ಇಡಿ.
ಆರಿದ ಬಳಿಕ ರೀಫೈಂಡ್ ಎಣ್ಣೆಯಲ್ಲಿ ಕರಿಯಿರಿ. ನಂತರದಲ್ಲಿ ಕರಿದ ಪದಾರ್ಥವನ್ನು ಎಳ್ಳೆಣ್ಣೆಯನ್ನು ಬಿಸಿ ಮಾಡಿಕೊಂಡು ಒಗ್ಗರಣೆ ಹಾಕಿ.
ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಗೆ ಬಾಡಿಸಿರಿ. ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿರಿ, ಅದಕ್ಕೆ ಕರಿದ ಹೋಳನ್ನು ಹಾಕಿ ತಿರುಗಿಸಿರಿ. ಬಳಿಕ ಉಪ್ಪು, ಖಾರ ಉಳಿದ ಮಸಾಲೆ ಸೇರಿಸಿ ಚೆನ್ನಾಗಿ ಬಾಡಿದ ಬಳಿಕ ಕೆಳಗೆ ಇಳಿಸಿರಿ.