ಹಸಿರ ಸೊಬಗಿನ ಮಲೆನಾಡಿನಲ್ಲಿ ಬಿಸಿಲ ಝಳ ಏರುತ್ತಿದೆ. ಬೆಳಿಗ್ಗೆ 9 ಗಂಟೆ ಆಗುತ್ತಲೇ ಸೂರ್ಯ ಬಿಸಿಲ ಕಿರಣವನ್ನು ಪಸರಿಸುತ್ತಾನೆ. ಶಿವಮೊಗ್ಗ ನಗರವಂತೂ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದೆ. ಬೀಸುವ ಗಾಳಿ ಕೂಡ ಬೆಚ್ಚಗಿದ್ದು, ಮಧ್ಯಾಹ್ನದ ವೇಳೆಗೆ ಜನರು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗತೊಡಗಿದೆ.
ಕಳೆದ ಒಂದೆರಡು ದಿನಗಳಿಂದ 40 ಡಿಗ್ರಿಗೆ ತಾಪಮಾನ ಏರಿದೆ. ಕಳೆದ15 ದಿನಗಳಿಂದಲೂ 38, 39, ಡಿಗ್ರಿ ಸೆಲ್ಷಿಯಸ್ ತಾಪಮಾನವಿದ್ದು, ಬೆಳಿಗ್ಗೆ ಕೂಡ 23ರಿಂದ 24 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿಲ ಝಳ ನೋಡಿದರೆ ನಾವು ಬಳ್ಳಾರಿ – ರಾಯಚೂರಿನಲ್ಲಿದ್ದೇವೋ ಎಂಬ ಭಾವ ಮೂಡುತ್ತದೆ. ಜನರು ಬಿಸಿಲ ಝಳದಿಂದ ಬಾಯಾರಿಕೆಯಿಂದ ತಂಪು ಪಾನೀಯಗಳು ಮೊರೆ ಹೋಗಿದ್ದಾರೆ. ಹೀಗಾಗಿ ಅವರ ದೈನಂದಿನ ಖರ್ಚು ಹೆಚ್ಚಾಗಿ ಜೇಬಿಗೆ ಕತ್ತರಿ ಬೀಳತೊಡಗಿದೆ.
ರಾತ್ರಿಯಂತೂ ಸೆಕೆಗೆ ಮತ್ತು ಸೊಳ್ಳೆಗಳ ಕಾಟಕ್ಕೆ ಜನರು ನಿದ್ರೆ ಮಾಡುವುದೇ ಕಷ್ಟವಾಗಿದೆ. ಅದರಲ್ಲೂ ಸಣ್ಣ ಮಕ್ಕಳು, ಎಳೆಯ ಕಂದಮ್ಮಗಳು ಹಾಗೂ ವೃದ್ಧರಿಗೆ ಕಿರಿಯಾಗುತ್ತಿದೆ. ವಿದ್ಯುತ್ ಹೋದರಂತೂ ದೇವರೇ ಗತಿ. ಜಾಗರಣೆ ಕಟ್ಟಿಟ್ಟ ಬುತ್ತಿ. ಹೊರಗೂ ಬರಲಾಗದೆ ಒಳಗೂ ಇರಲಾರದೆ ಸಂಕಟ ಪಡುವಷ್ಟರ ಮಟ್ಟಿಗೆ ಸೆಖೆ ಕಾಡುತ್ತದೆ. ಫ್ಯಾನ್ ಇದ್ದರೂ ಕೂಡ ಅದು ಕ್ರಮೇಣ ಬಿಸಿಯಾಗಿ ಮತ್ತಷ್ಟು ಸೆಖೆ ನೀಡುತ್ತದೆ.
ನಗರದಲ್ಲಿ ತಂಪು ಪಾನೀಯಗಳ ಮಾರಾಟ ಹೆಚ್ಚಾಗಿಯೇ ಇದೆ. ಕಲ್ಲಂಗಡಿ, ಎಳನೀರು, ಜ್ಯೂಸ್ ಮಜ್ಜಿಗೆ, ಕಬ್ಬಿನ ಹಾಲುಗಳಿಗೆ ಜನರು ಮುಗಿಬಿದ್ದಿದ್ದಾರೆ. ಇದಲ್ಲದೆ ಪ್ರಾಣಿ, ಪಕ್ಷಿಗಳು ಕೂಡ ನೀರಿಲ್ಲದೆ ಪರದಾಡುವ ಸ್ಥಿತಿ ಇದೆ. ಮರದ ನೆರಳಿಗೆ ಆಶ್ರಯಿಸಲು ಬಿಡಾಡಿ ದನಗಳು ಕಾಯುವಂತಾಗಿದೆ.ಹಲವರು ತಮ್ಮ ಮನೆಗಳ ಮುಂದೆ ತೊಟ್ಟಿಯನ್ನು ಇಟ್ಟು ಪ್ರಾಣ ಪಕ್ಷಿಗಳಿಗೆ ನೀರು ತುಂಬಿಸಿ ನೀಡಿದ್ದಾರೆ.
ಇನ್ನು ಈ ಭಯಂಕರ ಬಿಸಿಲಿಗೆ ಸಾಂಕ್ರಾಮಿಕ ರೋಗಗಳ ಭಯ ಜನರನ್ನು ಕಾಡುತ್ತಿದೆ. ಈಗಾಗಲೇ ಆರೋಗ್ಯಾಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಬರುವ ಬೇಧಿ, ವಾಂತಿ, ಮುಂತಾದವುಗಳಿಂದ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ನಗರದ ಹಲವು ಆರೋಗ್ಯ ಕೇಂದ್ರಗಳಲ್ಲಿ ಬಿಸಿಲಿನ ತಾಪಮಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಲ್ಲಿ ಜಾಗೃತಿ ಮೂಡಿಸಲು ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆ.
ಜೊತೆಗೆ ನೀರು ಸೇರಿದಂತೆ ದ್ರವರೂಪದ ಆಹಾರವನ್ನು ಹೆಚ್ಚು ಹೆಚ್ಚಾಗಿ ಸೇವಿಸುವಂತೆ ಸೂಚನೆ ನೀಡಿದ್ದಾರೆ. ಕರಿದ ಪದಾರ್ಥಗಳಿಂದ ದೂರ ಇರುವುದು ಕ್ಷೇಮ ಎನ್ನುತ್ತಾರೆ.
ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬಿಸಿಲು ಕಡಿಮೆ ಇರಬೇಕಿತ್ತು. ಆದರೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯಾದರೂ ಬಿಸಿಲು ಮತ್ತು ಸೆಕೆ ತಡೆಯಲಾಗುತ್ತಿಲ್ಲ. ಈಗಾಗಲೇ ರಾಯಚೂರಿನಲ್ಲಿ 43 ಡಿಗ್ರಿ ತಾಪಮಾನ ದಾಖಲಾಗಿದೆ. ಶಿವಮೊಗ್ಗದಲ್ಲಿ ಕೂಡ 40ರ ಅಸುಪಾಸಿನಲ್ಲಿದೆ.
ಸಾರ್ವಜನಿಕರು ಕಚೇರಿಗಳಿಗೆ ತೆರಳಲು ಕಷ್ಟವಾಗುತ್ತಿದೆ. ಅನೇಕ ಕಡೆಗಳಲ್ಲಿ ನೀರಿನ ಸೌಲಭ್ಯವೂ ಇರುವುದಿಲ್ಲ. ದ್ವಿಚಕ್ತ ಮತ್ತು ಕಾರುಗಳನ್ನು ನೆರಳಿಗೆ ನಿಲ್ಲಿಸುವುದೇ ಸಮಸ್ಯೆಯಾಗಿದೆ. ಇಡೀ ದಿನ ಬಿಸಿಲಿನಲ್ಲೇ ನಿಲ್ಲಿಸಬೇಕಾಗಿದೆ.
ಈ ಬಿಸಿಲಿಗೆ ಚರ್ಮದ ಕಾಯಿಲೆಗಳು ಸಾಮಾನ್ಯವಾಗಿವೆ. ಬೆವರುಸಾಲೆಯಿಂದ ಹಿಡಿದು ಚರ್ಮ ಕೆಂಪಾಗುವ, ಕಪ್ಪಾಗುವ ಸಾಧ್ಯತೆ ಇದೆ. ಇದಕ್ಕೆ ತಕ್ಷಣವೇ ವೈದ್ಯರ ಬಳಿ ತೆರಳಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಒಟ್ಟಾರೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಇನ್ನೂ ಹೆಚ್ಚುವ ಸಾಧ್ಯತೆ ಇರುವುದರಿಂದ ವಯಸ್ಸಾದವರನ್ನು, ಆದಷ್ಟು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಮಕ್ಕಳನ್ನು ಮನೆಯ ಒಳಗಡೆಯೇ ಆಡವಾಡಲು ಅನುಕೂಲ ಮಾಡಿಕೊಡಬೇಕು ಮತ್ತು ಯುವಕರು ಬಿಸಿಲ ತಾಪ ತಾಳದೆ ಈಜಾಡಲು ಹೋದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಹಾನಗರ ಪಾಲಿಕೆ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಇನ್ನೇನು ಮುಂಗಾರು ಮಳೆ ಕಾಲಿಡುತ್ತಿದೆ. ಅಲ್ಲಿಯವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದೆ.