ಗ್ರಾಹಕರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸೇವಾ ಪೂರೈಕೆದಾರರು ವಿತರಿಸುವ ಉತ್ಪನ್ನಗಳ ಪ್ಯಾಕೇಜ್, ಅಳತೆ ಮತ್ತು ತೂಕದಲ್ಲಿ ದೋಷ ಕಂಡು ಬಂದರೆ ವಿಧಿಸುವ ದಂಡದ ಪ್ರಮಾಣದಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ. ಹೊಸ ನಿಯಮ ಜನವರಿಯಿಂದಲೇ ಜಾರಿಗೆ ಬಂದಿದ್ದು, ಪೆಟ್ರೋಲ್ ಪಂಪ್ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಎಲ್ಲ ಸೇವಾ ಪೂರೈಕೆದಾರರಿಗೂ ಇದು ಅನ್ವಯವಾಗಲಿದೆ.
ನೂತನ ನಿಯಮದ ಪ್ರಕಾರ ಪ್ರಮಾಣಿತವಲ್ಲದ ತೂಕ, ಅಳತೆ ಬಳಕೆ ಮಾಡಿದ ಸಂದರ್ಭದಲ್ಲಿ ಈ ಹಿಂದೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು 2,500 ರೂಪಾಯಿಗಳಿಂದ 5,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ ಪ್ರಮಾಣಿತವಲ್ಲದ ಕ್ರಮದಲ್ಲಿ ವಹಿವಾಟು ನಡೆಸಿದರೆ ವಿಧಿಸುವ ದಂಡವನ್ನು 1000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಹಾಗೆಯೇ ಪ್ರಮಾಣಿತವಲ್ಲದ ರೀತಿಯಲ್ಲಿ ದರಪಟ್ಟಿ ಪ್ರದರ್ಶನ ಮಾಡಿದರೆ ವಿಧಿಸುತ್ತಿದ್ದ ದಂಡವನ್ನು 5,000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದರೆ, ನಿಗದಿತ ಪ್ರಮಾಣಕ್ಕಿಂತ ವ್ಯತ್ಯಾಸದ ರೀತಿಯಲ್ಲಿ ಪೂರೈಕೆ ಮಾಡಿದರೆ ವಿಧಿಸುವ ದಂಡವನ್ನು 1,000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಇನ್ನು ಪ್ಯಾಕೇಜ್ ಮಾಡಿದ ಉತ್ಪನ್ನಗಳ ಮೇಲೆ ಅಸಮರ್ಪಕ ರೀತಿಯಲ್ಲಿ ಲೇಬಲ್ ಹಾಕಿದ್ದರೆ ವಿಧಿಸುತ್ತಿದ್ದ 2,500 ರೂಪಾಯಿ ದಂಡವನ್ನು 5,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, ಅದೇ ರೀತಿ ಪ್ಯಾಕೇಜ್ ಮೇಲೆ ನಮೂದಿಸಿದ ಪ್ರಮಾಣದಲ್ಲಿ ಇಲ್ಲದಿದ್ದರೆ ಅಂತಹ ವೇಳೆ ವಿಧಿಸುವ ದಂಡವನ್ನು ಈ ಹಿಂದಿನಂತೆಯೇ 15,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.