ಚಿಕನ್ ಎಂದರೆ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟ. ಇಲ್ಲಿ ನಾನ್ ವೆಜ್ ಪ್ರಿಯರಿಗಾಗಿ ಕೇರಳ ಸ್ಟೈಲ್ ಚಿಕನ್ ಸಾರಿನ ರೆಸಿಪಿ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಚಿಕನ್ – 1 ಕೆಜಿ, ಬೆಳ್ಳುಳ್ಳಿ – 1 ಟೇಬಲ್ ಸ್ಪೂನ್, ಶುಂಠಿ – 1 ಟೇಬಲ್ ಸ್ಪೂನ್, ಹಸಿಮೆಣಸು – 3, ಈರುಳ್ಳಿ – 1 ದೊಡ್ಡದ್ದು, ಕರಿಬೇವು – 10 ಎಸಳು, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 3 ಟೇಬಲ್ ಸ್ಪೂನ್, ಮೆಂತೆಕಾಳು – 1 ಟೀ ಸ್ಪೂನ್, ಒಣಮೆಣಸು – 7, ಸಾಂಬಾರು ಈರುಳ್ಳಿ – 5, ಸಾಸಿವೆ – 1 ಟೀ ಸ್ಪೂನ್, ವಿನೇಗರ್ – 2 ಟೀ ಸ್ಪೂನ್, ಕೊತ್ತಂಬರಿ ಬೀಜ – 1 ½ ಟೇಬಲ್ ಸ್ಪೂನ್, ಕಾಳುಮೆಣಸು – 1 ಟೀ ಸ್ಪೂನ್, ಏಲಕ್ಕಿ – 2, ಸೋಂಪು – 1/2 ಟೀ ಸ್ಪೂನ್, ಗರಂ ಮಸಾಲ – 1ಟೀ ಸ್ಪೂನ್, ನೀರು – 2 ಕಪ್.
ಮಾಡುವ ವಿಧಾನ:
ಮೊದಲಿಗೆ ಒಣಮೆಣಸು, ಧನಿಯಾ ಬೀಜ, ಕಾಳುಮೆಣಸು, ಗರಂ ಮಸಾಲ, ಸಾಂಬಾರು ಈರುಳ್ಳಿ ಇವನ್ನು ಚೆನ್ನಾಗಿ ಒಂದು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಅನ್ನು ತರಿ ತರಿಯಾಗಿ ಜಜ್ಜಿ ಕೊಳ್ಳಿ, ಈರುಳ್ಳಿಯನ್ನು ಉದ್ದಕ್ಕೆ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಅದಕ್ಕೆ ಮೆಂತೆಕಾಳು, ಸಾಸಿವೆ, ಹಾಕಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಹಾಗೇ ಜಜ್ಜಿಕೊಂಡ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ಉಪ್ಪು, ವಿನೇಗರ್ ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿ. ಈರುಳ್ಳಿ ಕಂದುಬಣ್ಣ ಬಂದ ಮೇಲೆ ಮಿಕ್ಸಿಯಲ್ಲಿ ಪುಡಿಮಾಡಿಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದರ ಹಸಿವಾಸನೆ ಹೋಗುವವರಗೆ ಹುರಿಯಿರಿ.
ನಂತರ ಇದಕ್ಕೆ ಕ್ಲೀನ್ ಮಾಡಿಟ್ಟುಕೊಂಡ ಚಿಕನ್ ಅನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಿಕೊಂಡು 2 ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ತದನಂತರ ಏಲಕ್ಕಿ, ಸೋಂಪು ಹಾಕಿ ಮಿಕ್ಸ್ ಮಾಡಿ. ಚಿಕನ್ ಬೆಂದ ಮೇಲೆ ಎಣ್ಣೆ ಮೇಲೆ ತೇಲಿದಂತೆ ಆಗುತ್ತದೆ. ಆಗ ಕರಿಬೇವು ಹಾಕಿ ಗ್ಯಾಸ್ ಆಫ್ ಮಾಡಿ. ಅರ್ಧ ಗಂಟೆ ಬಿಟ್ಟು ಸರ್ವ್ ಮಾಡಿ.