alex Certify ಕರ್ನಾಟಕ ಬಜೆಟ್: 2023-24; ಯಾವ ಇಲಾಖೆಗೆ ಎಷ್ಟು ಹಣ ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕ ಬಜೆಟ್: 2023-24; ಯಾವ ಇಲಾಖೆಗೆ ಎಷ್ಟು ಹಣ ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಮನಗೆಲ್ಲುವ ಉದ್ದೇಶದಿಂದ ಬಜೆಟ್ ನೇ ಪ್ರಮುಖ ಅಸ್ತ್ರವಾನ್ನಾಗಿ ಪ್ರಯೋಗಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

3,09,182 ಕೋಟಿ ರೂಪಾಯಿ ಗಾತ್ರದ ಬಜೆಟ್ ನಲ್ಲಿ ಸರ್ವೋದಯ ಅಭಿವೃದ್ಧಿಗಾಗಿ 80 ಸಾವಿರ ಕೋಟಿಗೂ ಅಧಿಕ ಅನುದಾನ ಘೋಷಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 39,031 ಕೋಟಿ ಅನುದಾನ ಮೀಸಲಿಡಲಾಗಿದೆ. ಪ್ರಮುಖವಾಗಿ ಶಿಕ್ಷಣ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬರಪೂರ ಕೊಡಿಗೆಗಳನ್ನು ನೀಡಲಾಗಿದೆ.

ಇಲಾಖಾವಾರು ಹಣ ಘೋಷಣೆ:

ಶಿಕ್ಷಣ ಕ್ಷೇತ್ರಕ್ಕೆ – 37,960 ಕೋಟಿ ಮೀಸಲು
ಜಲಸಂಪನ್ಮೂಲ ಇಲಾಖೆ-22,854 ಕೋಟಿ ರೂ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ – 20,494 ಕೋಟಿ ರೂಪಾಯಿ
ನಗರಾಭಿವೃದ್ಧಿ -17,938 ಕೋಟಿ ರೂಪಾಯಿ
ಕಂದಾಯ ಇಲಾಖೆ – 15,943 ಕೋಟಿ ರೂಪಾಯಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 15,151 ಕೋಟಿ
ಒಳಾಡಳಿತ ಹಾಗೂ ಸಾರಿಗೆ -14,509 ಕೋಟಿ ರೂಪಾಯಿ
ಇಂಧನ ಇಲಾಖೆ -13,803 ಕೋಟಿ
ಸಮಾಜ ಕಲ್ಯಾಣ – 11,163 ಕೋಟಿ
ಲೋಕೋಪಯೋಗಿ ಇಲಾಖೆ – 10,741 ಕೋಟಿ
ಕೃಷಿ ಹಾಗೂ ತೋಟಗಾರಿಕೆ ಇಲಾಖೆ -9,456 ಕೋಟಿ ರೂಪಾಯಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-5,676 ಕೋಟಿ ರೂಪಾಯಿ
ಆಹಾರ ಇಲಾಖೆ -4,600 ಕೋಟಿ
ವಸತಿ ಇಲಾಖೆ -3,787 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಎಲ್ಲ ವರ್ಗಗಳ, ಎಲ್ಲ ಪ್ರದೇಶಗಳ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ. ಕಳೆದ ಆಯವ್ಯಯದಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ ಅಂತಹ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ಸಂಬಂಧಿಸಿದ ಸೂಚ್ಯಂಕಗಳನ್ನು ರಾಜ್ಯ ಸರಾಸರಿಗಿಂತ ಹೆಚ್ಚು ಮಾಡಲು 3,000 ಕೋಟಿ ರೂ. ಗಳ ಯೋಜನೆಗಳನ್ನು ಘೋಷಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಬಿಸಿಯೂಟ ತಯಾರಕರು, ಬಿಸಿಯೂಟ ಸಹಾಯಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರು, ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಗೌರವಧನ ಹೆಚ್ಚಿಸಲಾಗಿದೆ. ಇದರಿಂದ 4.45 ಲಕ್ಷ ಜನರಿಗೆ ಫಲ ದೊರೆತಿದ್ದು, ಒಟ್ಟು 775 ಕೋಟಿ ರೂ. ಗಳನ್ನು ಪ್ರಸಕ್ತ ವರ್ಷದಲ್ಲಿ ಬಿಡುಗಡೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕತೆ ವಲಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಮತ್ತು ಗ್ರಂಥಪಾಲಕರ ಸೇವೆಯನ್ನು ಗುರುತಿಸಿ, ಅವರಿಗೆ ನೀಡುವ ಮಾಸಿಕ ಗೌರವಧನವನ್ನು 1,000 ರೂ. ದಂತೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ 725 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. 2022-23ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರು ಹಾಗೂ ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯನ್ನು ರಾಜ್ಯದ ಸಿಂಪಿಗರ ಮಕ್ಕಳಿಗೂ ವಿಸ್ತರಿಸಲಾಗುತ್ತಿದೆ.

ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಅನುವು ಮಾಡಿಕೊಡುವ ದೃಷ್ಟಿಯಿಂದ ʻಮುಖ್ಯಮಂತ್ರಿ ವಿದ್ಯಾಶಕ್ತಿʼ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು. ರಾಜ್ಯದಲ್ಲಿ ಈಗಾಗಲೇ 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸಾರ್ವಜನಿಕ ಬಸ್ಸುಗಳ ಸೇವೆಯನ್ನು ಅವಲಂಬಿಸಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಲ್ಲಿ ಸಾರಿಗೆ ನಿಗಮಗಳ ಮೂಲಕಳಿಂದ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಕಾರ್ಯಾಚರಣೆಗಳನ್ನು ಮಾಡಲು ʻಮಕ್ಕಳ ಬಸ್ಸುʼ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ವಿವೇಕ ಯೋಜನೆಯಡಿಯಲ್ಲಿ 7,601 ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು 1,194 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಉತ್ತಮ ಮೂಲಭೂತ ಸೌಕರ್ಯಗಳು ಮತ್ತು ಸೂಕ್ತ ಕಲಿಕಾ ಸಂಪನ್ಮೂಲಗಳನ್ನು ಮಕ್ಕಳಿಗೆ ಒದಗಿಸಲು ಹೊಸ ಕೇಂದ್ರ ಪುರಸ್ಕೃತ ಯೋಜನೆಯಾದ PM SHRI ಯನ್ನು 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳು ಹಾಗೂ ಪಠ್ಯ ವಿಷಯಗಳನ್ನು ಮುಂದಿನ ಒಂದು ವರ್ಷದಲ್ಲಿ ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನದ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದಕ್ಕೆ ರಾಜ್ಯದಲ್ಲಿ 100 ಆಯ್ದ ಪದವಿ ಕಾಲೇಜುಗಳಲ್ಲಿ ಪ್ರೊ. ಸಿ.ಎನ್.ಆರ್. ರಾವ್ ವಿಜ್ಞಾನ ಕಾರ್ಯಕ್ರಮದಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಗುವುದು. ʻಹಳ್ಳಿ ಮುತ್ತುʼ ಎಂಬ ಯೋಜನೆಯಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲಾ ಶಿಕ್ಷಣವನ್ನು ಪೂರೈಸುವ 500 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಅವರು CET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವೃತ್ತಿಪರ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭರಿಸಲಾಗುವುದು. ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಸರಳ ಹಾಗೂ ಪಾರದರ್ಶಕ ಪ್ರವೇಶಾವಕಾಶಕ್ಕೆ ಏಕರೂಪ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಒಂದರಂತೆ, ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ಗಳಿಗೆ ʻವೃದ್ಧಿʼ ಯೋಜನೆಯಡಿ ತಲಾ 2 ಕೋಟಿ ರೂ. ನಂತೆ ಒಟ್ಟು 124 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇವುಗಳನ್ನು ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು 2022-23ರ ಆಯವ್ಯಯದಲ್ಲಿ ಅಂದಾಜಿಸಿದ 46,955 ಕೋಟಿ ರೂ. ಗಳಿಂದ 2023-24ನೇ ಸಾಲಿನಲ್ಲಿ 61,234 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಇದು ಕಳೆದ ವರ್ಷದ ಆಯವ್ಯಯ ಅಂದಾಜಿಗಿಂತ ಶೇ.30.4ರಷ್ಟು ಹೆಚ್ಚಾಗಿದೆ. ಇದು ಕಳೆದ 10 ವರ್ಷಗಳಲ್ಲಿನ ಬಂಡವಾಳ ಹಂಚಿಕೆಯಲ್ಲಿ ಅತೀ ಹೆಚ್ಚಿನ ಏರಿಕೆಯಾಗಿದೆ.

ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಮಾನ ನಿಲ್ದಾಣಗಳ ಅಭಿವೃದ್ಧಿ, ರೈಲು ಮಾರ್ಗಗಳ ಅಭಿವೃದ್ಧಿ, ಸಬ್‌ಅರ್ಬನ್ ರೈಲ್ವೆ ನಿಲ್ದಾಣ, ಬಂದರುಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ ಮೊದಲಾದ ಮೂಲಸೌಕರ್ಯಗಳ ಅಭಿವೃದ್ಧಿಗೆ 69,031 ಕೋಟಿ ರೂ. ಗಳ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯವು ಕಳೆದ 5 ವರ್ಷಗಳಲ್ಲಿ 23 ಲಕ್ಷ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯಡಿ ವಿವಿಧ ಇಲಾಖೆಗಳೊಂದಿಗೆ ಒಗ್ಗೂಡಿಸಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳಲ್ಲಿ 2.25 ಲಕ್ಷ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ, 25 ಸಾವಿರ ಎಕರೆ ಪ್ಲಾಂಟೇಷನ್‌, 25 ಸಾವಿರ ಎಕರೆ ರೇಷ್ಮೆ ಪ್ರದೇಶ ವಿಸ್ತರಣೆ, 1.25 ಲಕ್ಷ ಎಕರೆ ಕೃಷಿ ಅರಣ್ಯೀಕರಣ ಸೇರಿರುತ್ತದೆ. ಅಲ್ಲದೆ 12,547 ಶಾಲಾ ಕಾಂಪೌಂಡ್, 2,331 ಆಟದ ಮೈದಾನಗಳು, 17,574 ಶೌಚಾಲಯಗಳು, 3,117 ಅಂಗನವಾಡಿ ಕಟ್ಟಡಗಳು,
4.95 ಲಕ್ಷಗಳ ಜಾನುವಾರು ಶೆಡ್‌ಗಳ ನಿರ್ಮಾಣವಾಗಿವೆ. ಜೊತೆಗೆ 42,717 ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನ, 1.34 ಲಕ್ಷ ರಸ್ತೆ ಕಾಮಗಾರಿಗಳು ಹಾಗೂ 13,500 ಕಿ.ಮೀ. ರಸ್ತೆ ಬದಿ ನೆಡುತೋಪುಗಳೂ ಸೇರಿವೆ. ಈ ಯೋಜನೆಯಡಿಯಲ್ಲಿ 2023-24ನೇ ಸಾಲಿನಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ 88 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೈ ಡೆನ್ಸಿಟಿ ಕಾರಿಡಾರ್‌ ಯೋಜನೆಯಡಿಯಲ್ಲಿ ಒಟ್ಟು 108 ಕಿ.ಮೀ. ರಸ್ತೆಗಳನ್ನು 273 ಕೋಟಿ ರೂ. ಗಳ ಅಂದಾಜಿನಲ್ಲಿ ತೆಗೆದುಕೊಳ್ಳಲಾಗಿದೆ. ಮಳೆ ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರವಾಹವನ್ನು ತಪ್ಪಿಸಲು, ಒಟ್ಟು 195 ಕಿ.ಮೀ. ಉದ್ದದ ಚರಂಡಿ ಮತ್ತು ಕಲ್ವರ್ಟ್‌ಗಳ ಅಭಿವೃದ್ಧಿಗಾಗಿ 1,813 ಕೋಟಿ ರೂ. ಗಳನ್ನು ಒದಗಿಸಲಾಗಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರಮುಖ 75 ಜಂಕ್ಷನ್‌ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ ʻThe Safe City Projectʼ ಅನ್ನು ಸಮರೋಪಾದಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಬೆಂಗಳೂರು ಮಹಾನಗರದ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ʻShe Toiletʼ ಗಳನ್ನು ನಿರ್ಮಿಸಲಾಗುವುದು. ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 2023-24ನೇ ಸಾಲಿಗೆ 9,698 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ.

ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ 3,458 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ವಲಯಕ್ಕೆ ಒಟ್ಟು 68,585 ಕೋಟಿ ರೂ. ಗಳ ಅನುದಾನ ಮೀಸಲಿಡಲಾಗಿದೆ. ಒಟ್ಟಾರೆ ಚುನಾವಣೆ ಸಂದರ್ಭದಲ್ಲಿ ಮಂಡನೆಯಾಗಿರುವ ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆಯಂತೆ ಆಡಳಿತ ಪಕ್ಶಗಳು ಶಹಬ್ಬಾಸ್ ಗಿರಿ ನೀಡುತ್ತಿದ್ದರೆ, ವಿಪಕ್ಷಗಳು ಈ ಬಜೆಟ್ ಭಾಷನಕ್ಕೆ ಸೀಮಿತವಾಗಿದ್ದು, ಯಾವ ಯೋಜನೆಗಳೂ ಜಾರಿಗೆ ಬಾರದ ಕೇವಲ ಕನಸಿನ ಆಯವ್ಯಯ ಎಂದು ಲೇವಡಿ ಮಾಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...