ಬೆಂಗಳೂರು: ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗಿರುವ ಸರ್ಕಾರದ ಪ್ರಸ್ತಾವ ವಿರೋಧಿಸಿ ಮದ್ಯ ಮಾರಾಟಗಾರರು ಗುರುವಾರ ರಾಜ್ಯಾದ್ಯಂತ ಮದ್ಯ ಎತ್ತುವಳಿ ಮಾಡದೆ ವಿರೋಧ ವ್ಯಕ್ತಪಡಿಸಲಿದ್ದಾರೆ.
ಮದ್ಯ ಮಾರಾಟ ಎಂದಿನಂತೆ ಇರಲಿದೆ. ಜುಲೈ 1ರಿಂದ ಅನ್ವಯವಾಗುವಂತೆ ಶೇಕಡ 100ರಷ್ಟು ಶುಲ್ಕ ಹೆಚ್ಚಳ ಮಾಡುವುದಕ್ಕೆ ಕರ್ನಾಟಕ ಮದ್ಯ ಮಾರಾಟಗಾರರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರ್ಕಾರದ ಪ್ರಸ್ತಾವಕ್ಕೆ ಮದ್ಯ ಮಾರಾಟಗಾರರ ಪ್ರಬಲ ವಿರೋಧವಿದೆ. ಹೀಗಾಗಿ ಗುರುವಾರ ಒಂದು ದಿನ ಮದ್ಯ ಎತ್ತುವಳಿ ಮಾಡುವುದಿಲ್ಲ.
ಇಂದು ಸಂಘದ ಪದಾಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಸಭೆಯಲ್ಲಿ ಸರ್ಕಾರದ ವಿರುದ್ಧದ ಹೋರಾಟದ ಮುಂದಿನ ರೂಪುರೇಷೆಗಳ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಜುಲೈನಿಂದ ಅಬಕಾರಿ ವರ್ಷ ಆರಂಭವಾಗಲಿದ್ದು, ಆಗ ರಾಜ್ಯದ ಎಲ್ಲಾ 13 ಸಾವಿರಕ್ಕೂ ಅಧಿಕ ಅಬಕಾರಿ ಸನ್ನದುದಾರರು ತಮ್ಮ ಲೈಸೆನ್ಸ್ ನವೀಕರಿಸಿಕೊಳ್ಳಬೇಕಿದೆ. ಇದನ್ನು ಗಮನಿಸಿಯೇ ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಲೈಸೆನ್ಸ್ ಗಳ ಶುಲ್ಕದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಕರಡು ಅಧಿಸೂಚನೆ ಹೊರಡಿಸಿದೆ.