ಬ್ಯಾಂಕಾಕ್: ವಿಶ್ವದ ಅತಿ ಸುಂದರ ಮಹಿಳೆಯರ ಸಾಲಿನಲ್ಲಿ ಥೈಲ್ಯಾಂಡ್‌ನ ಜನಪ್ರಿಯ ನಟಿ ಲಿಂಗ್ಲಿಂಗ್ ಸಿರಿಲಾಕ್ ಕ್ವಾಂಗ್ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ‘ದಿ ನೆಟಿಜನ್ಸ್ ಚಾಯ್ಸ್ ಮ್ಯಾಗಜಿನ್’ ನಡೆಸಿದ ಜಾಗತಿಕ ಸಾರ್ವಜನಿಕ ಮತದಾನದಲ್ಲಿ ಗರಿಷ್ಠ ಬೆಂಬಲ ಪಡೆಯುವ ಮೂಲಕ ಅವರು “2026ರ ವಿಶ್ವದ ಅತ್ಯಂತ ಸುಂದರಿ” ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
ಈ ಜಾಗತಿಕ ಸಮೀಕ್ಷೆಯಲ್ಲಿ ಪ್ರಪಂಚದಾದ್ಯಂತದ ಅಭಿಮಾನಿಗಳಿಂದ ಸುಮಾರು 2.2 ಕೋಟಿಗೂ ಹೆಚ್ಚು ಮತಗಳು ದಾಖಲಾಗಿದ್ದವು. ನಿಯತಕಾಲಿಕೆಯ ವೆಬ್‌ಸೈಟ್, ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಡೆದ ಈ ಪೈಪೋಟಿಯಲ್ಲಿ ಲಿಂಗ್ಲಿಂಗ್ ಕ್ವಾಂಗ್ ಅವರು ಭಾರೀ ಮತಗಳ ಅಂತರದಿಂದ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಥೈಲ್ಯಾಂಡ್‌ನ ಅತ್ಯಂತ ಸುಂದರ ನಟಿಯರ ಪಟ್ಟಿಯಲ್ಲೂ 1 ಕೋಟಿಗೂ ಅಧಿಕ ಮತಗಳನ್ನು ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿ ಗೆದ್ದಿದ್ದ ಟರ್ಕಿಯ ನಟಿ ಸಿಲಾ ತುರ್ಕೊಗ್ಲು ಈ ಬಾರಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಪಟ್ಟಿಯಲ್ಲಿರುವ ಇತರ ಪ್ರಮುಖ ನಟಿಯರಾದ ಯಾಗ್ಮುರ್ ಯುಕ್ಸೆಲ್, ಒರ್ಮ್ ಕೊರ್ನ್ನಫಾತ್, ಬೈ ಲೂ, ದಿಲ್ರಾಬಾ ದಿಲ್ಮುರಾತ್ ಮತ್ತು ಹಾಲಿವುಡ್ ನಟಿ ಸ್ಕಾರ್ಲೆಟ್ ಜಾನ್ಸನ್ ಅವರು ಅಗ್ರ ಹತ್ತು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಂಗ್ ಕಾಂಗ್‌ನಲ್ಲಿ ಜನಿಸಿದ ಲಿಂಗ್ಲಿಂಗ್ ಕ್ವಾಂಗ್ ಅವರು ಥೈಲ್ಯಾಂಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ಪ್ರಸಿದ್ಧ ನಟಿ, ಮಾಡೆಲ್ ಹಾಗೂ ಉದ್ಯಮಿಯಾಗಿ ಬೆಳೆದಿದ್ದಾರೆ. ಥಾಯ್, ಕಾಂಟೋನೀಸ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಸರಾಗವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರುವ ಇವರು, ಏಷ್ಯಾದಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2024ರಲ್ಲಿ ತೆರೆಕಂಡ ‘ದಿ ಸೀಕ್ರೆಟ್ ಆಫ್ ಅಸ್’ ಧಾರಾವಾಹಿಯ ಮೂಲಕ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು.
ಸುಂದರ ರೂಪ ಹಾಗೂ ವಿಶಿಷ್ಟ ಅಭಿನಯದ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಲಿಂಗ್ಲಿಂಗ್, ಪ್ರಸಿದ್ಧ ಫ್ಯಾಷನ್ ಶೋಗಳು ಮತ್ತು ಐಷಾರಾಮಿ ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಸಕ್ರಿಯರಾಗಿದ್ದಾರೆ.

