ಬೆಂಗಳೂರು: ಬೆಂಗಳೂರಿನಲ್ಲಿ ಕರ್ತವ್ಯ ನಿರತ ಲೈನ್ ಮ್ಯಾನ್ ಗೆ ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಕಂಬದಲ್ಲಿಯೇ ಸಿಲುಕಿಕೊಂಡು ನೇತಾಡಿದ ಘಟನೆ ನಡೆದಿದೆ.
ಬೆಂಗಳೂರಿನ ಸುಂಕದಕಟ್ಟೆ ಬಳಿ ವಿದ್ಯುತ್ ಸಂಪರ್ಕ ಕಲ್ಪಿಸಲೆಂದು ಕಂಬ ಹತ್ತಿದ್ದ ವೇಳೆ ಲೈನ್ ಮ್ಯಾನ್ ಗೆ ಏಕಾಏಕಿ ವಿದ್ಯುತ್ ಪ್ರವಹಿಸಿ ಕರೆಂಟ್ ಶಾಕ್ ಹೊಡೆದಿದೆ. ಲೈನ್ ಮ್ಯಾನ್ ಪ್ರಕಾಶ್ ಕಂಬದಲ್ಲೇ ಸಿಲುಕಿ ನೇತಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಬುಧವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕರೆಂಟ್ ಶಾಕ್ ಗೆ ಕರುಳು ಕಾಣಿಸುವಷ್ಟು ಹೊಟ್ಟೆಯ ಭಾಗ ಸುಟ್ಟುಹೋಗಿದೆ. ಲೈನ್ ಮ್ಯಾನ್ ಪ್ರಕಾಶ್ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಬೆಸ್ಕಾಂ ತನ್ನ ಸಿಬ್ಬಂದಿಯ ನೆರವಿಗೆ ಬಂದಿಲ್ಲ. ಚಿಕಿತ್ಸೆಗೆ ನೆರವು ನೀಡದೇ ವಾರದಿಂದ ನಿರ್ಲಕ್ಷ ಮೆರೆದಿದೆ. ಲೈನ್ ಮೆನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.