BIG NEWS : ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಲೇಔಟ್ ನಿರ್ಮಾಣ :  ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು :   ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿ ಜಮೀನುಗಳಲ್ಲಿ ಲೇಔಟ್ ನಿರ್ಮಾಣದ ಕುರಿತು  ಸರ್ಕಾರ  ಮಹತ್ವದ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲು ನಿಯಮಗಳ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ರ ಪ್ರಕರಣ 199(ಬಿ) ರಲ್ಲಿ ಕಟ್ಟಡ ನಿರ್ಮಾಣ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿ.ಐ.ಡಿಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಗಳು, ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಬಡಾವಣೆ ನಕ್ಷೆಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳಲು ಅಭಿವೃದ್ಧಿದಾರರು ನಮೂನೆ-1ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು.

ವಿನ್ಯಾಸ ನಕ್ಷೆಯ ಪ್ರಕಾರ ಬಡಾವಣೆಯ ಮಾಲೀಕರು ಸಂಬಂಧಿಸಿದ ಗ್ರಾಮ ಪಂಚಾಯತಿಗೆ ವಿನ್ಯಾಸ ನಕ್ಷೆಯ ಪ್ರಕಾರ ರಸ್ತೆಗಳ ಅಗಲೀಕರಣಕ್ಕೆ ಮೀಸಲಿರಿಸಿದ ರಸ್ತೆಗಳು ಸೇರಿದಂತೆ ರಸ್ತೆಗಳು, ಪಾರ್ಕ್ ಗಳು , ವಾಹನ ನಿಲ್ದಾಣಗಳು, ನಾಗರೀಕ ಸೌಲಭ್ಯದ ಪ್ರದೇಶಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳು ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪ್ರದೇಶಗಳನ್ನು ಉಚಿತವಾಗಿ ನೋಂದಾಯಿತ ಪರಿತ್ಯಾಜನ ಪತ್ರದ ಮುಖಾಂತರ ವರ್ಗಾಯಿಸಬೇಕಾಗುತ್ತದೆ.

ಬಡಾವಣೆಯ ಮಾಲೀಕರು, ವಿನಿಯಮ-11 ರ ಪ್ರಕಾರ ಅನುಮೋದಿತ ಬಡಾವಣೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಹಾಗೂ ಇತರೆ ಅವಶ್ಯಕ ಇಲಾಖೆಗಳಿಂದ ಅನುಮೋದಿತ ವಿನ್ಯಾಸದಂತೆ ದೃಢೀಕೃತ ಅಂದಾಜು ಪಟ್ಟಿಗಳನ್ವಯ ಅನುಷ್ಠಾನ ಮಾಡಬೇಕಾಗುತ್ತದೆ.

ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶದಲ್ಲಿ ಬರುವ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ವಿನ್ಯಾಸ ಅನುಮೋದನೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಿರುವುದನ್ನು ಖಾತ್ರಿಪಡಿಸಿಕೊಂಡು ಬಡಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ನಿರ್ವಹಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read