ಉಡುಪಿ: ಬಿಜೆಪಿ ನಾಯಕರು ಅನಾವಶ್ಯಕವಾಗಿ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವರು, ಸರ್ಕಾರವನ್ನ ಹಿಂದು ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿ ನಾಯಕರಿಗೆ ಬೇರೆ ಏನೂ ಕೆಲಸವಿಲ್ಲ. ಸರ್ಕಾರದ ವಿರುದ್ಧ ಆರೋಪ ಮಾಡಿವುದೇ ಕೆಲಸ. ಈ ಹಿಂದೆ ರಾಜ್ಯ ಸರ್ಕಾರ ಬೀಳುತ್ತದೆ, ಗ್ಯಾರಂಟಿ ಯೋಜನೆಗಳು ಜಾರಿ ಆಗಲ್ಲ, ಒಂದು ವೇಳೆ ಜಾರಿಯಾದರೂ ನಾಲ್ಕು ತಿಂಗಳಿಗೆ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಅಪಪ್ರಚಾರ ಮಾಡಿದರು. ರಾಜ್ಯದ ಜನತೆಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ವಿರುದ್ಧ ಎಫ್ ಐಆರ್ ದಾಖಲಿಸಿರುವುದಕ್ಕೆ ವಿಪಕ್ಷಗಳು ಖಂಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಿ.ಟಿ.ರವಿ ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ವಿಧಾನಸಭೆಯಲ್ಲಿ ಶಾಸನ ತರಲಾಗಿದೆ. ದ್ವೇಷದ ಭಾಷಣವನ್ನು ಬಿಜೆಪಿ- ಕಾಂಗ್ರೆಸ್ ನಾಯಕರು ಯಾರೇ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಾಳೆ ಕಾಂಗ್ರೆಸ್ಸಿಗರು ಮಾತನಾಡಿದರೂ ಕ್ರಮ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ. ಶಾಂತಿ ಕದಡುವ ಕೆಲಸ ಮಾಡಿದರೆ ಖಂಡಿತ ಎಫ್ ಐ ಆರ್ ಆಗುತ್ತದೆ ಎಂದರು.