ಬೆಂಗಳೂರಿನ ರಸ್ತೆಯೊಂದು ಕೊನೆಗೂ ದುರಸ್ತಿ ಕಂಡಿದೆ. ಈ ರಸ್ತೆ ಎಷ್ಟು ಹದಗೆಟ್ಟಿತ್ತು ಎಂದರೆ ರಸ್ತೆ ಎಲ್ಲಿದೆ, ಚರಂಡಿ ಎಲ್ಲಿದೆ? ಎಂಬುದೇ ಗೊಂದಲಕ್ಕೆ ಕಾರಣವಾಗಿತ್ತು. ಮಳೆಗಾಲದಲ್ಲಿ ಇಲ್ಲಿ ಸಂಚಾರ ನಡೆಸುವ ವಾಹನ ಸವಾರರು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದರು.
ಇದು ಬೆಂಗಳೂರು ನಗರದ ಲಗ್ಗೆರೆ ಮುಖ್ಯ ರಸ್ತೆಯ ಕಥೆ. ನಿರ್ಲಕ್ಷ್ಯಕ್ಕೊಳಗಾಗಿ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದ ರಸ್ತೆ ಈಗ ಸರಿಯಾಗಿದೆ. ಈ ರಸ್ತೆ ರಿಪೇರಿ ಮಾಡಲು ಆರ್.ಆರ್.ನಗರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಸಾಕಷ್ಟು ಹೋರಾಟ ಮಾಡಿದ್ದರು.
ಈ ಕುರಿತು ಕುಸುಮಾ ಹನುಮಂತರಾಯಪ್ಪ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಹಲವು ವರ್ಷಗಳಿಂದ ಲಗ್ಗೆರೆ ಮುಖ್ಯ ರಸ್ತೆ ನಿರ್ಲಕ್ಷ್ಯಕ್ಕೊಳಗಾಗಿ, ಸಾರ್ವಜನಿಕರು ಮತ್ತು ಸಂಚಾರಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು’ ಎಂದು ಹೇಳಿದ್ದಾರೆ.
‘ಈ ಹಿನ್ನೆಲೆಯಲ್ಲಿ ನಮ್ಮ ಯುವ ಕಾಂಗ್ರೆಸ್ ತಂಡವು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು. ನಮ್ಮ ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ಆಯುಕ್ತರನ್ನು ಭೇಟಿ ಮಾಡಿ ರಸ್ತೆಯ ದುರವಸ್ಥೆಯನ್ನು ವಿವರವಾಗಿ ಮನವರಿಕೆ ಮಾಡಿಸಲಾಯಿತು’ ಎಂದು ತಿಳಿಸಿದ್ದಾರೆ.

‘ನಿರಂತರ ಪ್ರಯತ್ನ ಮತ್ತು ಹೋರಾಟದ ಫಲವಾಗಿ, ಬಹುಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. ಅಭಿವೃದ್ಧಿಗೆ ನಮ್ಮ ಬದ್ಧತೆ ಸದಾ ಅಚಲವಾಗಿರುತ್ತದೆ’ ಎಂದು ಪೋಸ್ಟ್ ಹಾಕಿದ್ದಾರೆ.

