HomeLatest Newsನದಿ ಜೋಡಿಸುವುದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡಿದ ಹಾಗಲ್ಲ ಡಿಕೆಶಿಯವರೇ; ಎಚ್‌ಡಿಕೆ ಕಿಡಿ

ನದಿ ಜೋಡಿಸುವುದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡಿದ ಹಾಗಲ್ಲ ಡಿಕೆಶಿಯವರೇ; ಎಚ್‌ಡಿಕೆ ಕಿಡಿ

ಬೆಂಗಳೂರು: ಪ್ರಗತಿ ಪರಿಶೀಲನೆ ನೆಪದಲ್ಲಿ ರಾಜ್ಯದ ಉದ್ದಗಲಕ್ಕೂ ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗಳು, ರಾಜ್ಯದ ನೀರಾವರಿ ಹಿತಾಸಕ್ತಿಯ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಟೀಕಾಪ್ರಹಾರ ನಡೆಸಿದರು.

ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಅವರ ನಡೆಸಿದ ಪ್ರಗತಿ ಪರಿಶೀಲನೆ ಕೇವಲ ಜಾಲಿಟ್ರಿಪ್ ಮಾತ್ರ. ಹಾಗೆಯೇ ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವ ಮುಖ್ಯಮಂತ್ರಿ ವರ್ತನೆ ಅತ್ಯಂತ ಹೊಣೆಗೇಡಿತನದಿಂದ ಕೂಡಿದೆ. ರಾಜ್ಯದ ನೀರಾವರಿಯ ಸಂಕಷ್ಟಗಳ ಬಗ್ಗೆ ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ ಎಂದು ಸಚಿವರು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನದಿ ಜೋಡಣೆ ಬಗ್ಗೆ ನನ್ನ ವಿರೋಧ ಇಲ್ಲ. ಯೋಜನೆ ಜಾರಿಗೆ ಬರಲೇಬೇಕು. ಆದರೆ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯಿಂದ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಎಷ್ಟು? ಎಂಬುದನ್ನು ತಿಳಿದುಕೊಂಡು ಯೋಜನೆಯ ಬಗ್ಗೆ ಚರ್ಚಿಸಬೇಕು. ದೇವೇಗೌಡರು ಹೋರಾಟ ಮಾಡಿದ ನಂತರ ಹಂಚಿಕೆಯಾದ ನೀರಿನ ಪ್ರಮಾಣ ಎಷ್ಟು ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಕನಿಷ್ಠ ಮಾಹಿತಿ ಇಲ್ಲ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದೂರಿದರು.

ನದಿ ಜೋಡಣೆ ಎಂದರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸುವ ಹಾಗೆ ಅಲ್ಲ ಎಂದು ಮುಖ್ಯಮಂತ್ರಿಗೆ ತೆಗೆದುಕೊಂಡ ಕೇಂದ್ರ ಸಚಿವರು, ನಿಮಗೆ ಮಾಹಿತಿ ಇಲ್ಲದಿದ್ದರೆ ನೀರಾವರಿ ತಜ್ಞರು ಅಥವಾ ಇಲಾಖೆಯ ಎಂಜಿನಿಯರ್ ಗಳಿಂದ ಅಥವಾ ರಾಜ್ಯದ ಪರ ವಕಾಲತ್ತು ವಹಿಸುವ ವಕೀಲರ ಬಳಿ ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಇಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ನಗೆಪಾಟಲಿಗೆ ತುತ್ತಾಗಿದ್ದೀರಿ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಅವರು ಕೃಷ್ಣಾ, ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆ ಬಗ್ಗೆ ತೀರ್ಮಾನ ಮಾಡಲಾಗಿದೆ ಹಾಗೂ ಅದಕ್ಕೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವ ಬಗ್ಗೆ ಕೇಂದ್ರ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಮ್ಮ ಸಿಎಂಗೆ ದಾರಳತನ ಜಾಸ್ತಿ ಬಂದಿದೆ. ಹಿಂದಿನ ಮುಖ್ಯಮಂತ್ರಿ ಯಾವಾಗಲೂ ಕೇಂದ್ರದ ವಿರುದ್ಧ ದಿನವೂ ಸಂಘರ್ಷ ಮಾಡುತ್ತಿದ್ದರು. ಈಗಿನ ಮುಖ್ಯಮಂತ್ರಿ ನೋಡಿದರೆ ಕೃಷ್ಣಾ, ಕಾವೇರಿ ಗೋದಾವರಿ ನದಿ ಜೋಡಣೆಗೆ ಸಮ್ಮತಿ ಅಂತ ಹೇಳಿದ್ದಾರೆ. ವಾರದ ಹಿಂದೆ ಮೂವರು ಮುಖ್ಯಮಂತ್ರಿಗಳು ಸೇರಿ ಕ್ರೆಸ್ಟ್ ಗೇಟ್ ಗಳ ಬಟನ್ ಒತ್ತಿದರು. ಹಣ ನಮ್ಮ ರಾಜ್ಯದ್ದು. ನೀರು ಬೇರೆಯವರಿಗೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಸಲು ನೆರೆ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದೇನೆ ಎಂದು ನಮ್ಮ ಸಿಎಂ ಹೇಳಿಕೆ ನೀಡಿದ್ದಾರೆ. ಅದಕ್ಕೂ ಸಮ್ಮತಿ ಇದೆ ಅಂತಾರೆ. ಇದರ ಬಗ್ಗೆ ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಲು ಬೇಡವೇ? ರಾಜ್ಯದ ಜನತೆಗೆ ತಿಳಿಸುವುದು ಬೇಡ? ಮುಖ್ಯಮಂತ್ರಿ ರಾಜ್ಯದಲ್ಲಿ ಕತ್ತಲೆಯಲ್ಲಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಹಿಂದೆ ಒಂದು ಬಾರಿ ಕಾಂಗ್ರೆಸ್ಸಿನವರು ವಿಧಾನಸಭೆಗೆ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದರು. ಈಗ ಈ ಮುಖ್ಯಮಂತ್ರಿ ವಿರೋಧ ಪಕ್ಷಗಳಿಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಕಿವಿಯಲ್ಲಿ ಹೂವು ಇಡಲು ಹೊರಟಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.

ಈ ಯೋಜನೆಯಿಂದ ರಾಜ್ಯಕ್ಕೆ ಅನ್ಯಾಯ:

ಕೃಷ್ಣಾ, ಕಾವೇರಿ, ಗೋದಾವರಿ ನದಿ ಜೋಡಣೆಯ ಬಗ್ಗೆ ಇದುವರೆಗೆ ಏನಾಗಿದೆ ಎಂಬುದನ್ನು ಮೊದಲು ಮುಖ್ಯಮಂತ್ರಿ ಅರಿತುಕೊಳ್ಳಬೇಕು. 2023ರಲ್ಲಿ ನಿತಿನ್ ಗಡ್ಕರಿ ಅವರು ಕೇಂದ್ರದ ಜಲಶಕ್ತಿ ಸಚಿವರಾಗಿದ್ದಾಗ 247 ಟಿಎಂಸಿ ನೀರನ್ನು ಉಪಯೋಗ ಮಾಡಬಹುದು ಎಂದು ಸಮಗ್ರ ಯೋಜನಾ ವರದಿ (DPR) ಮಾಡಲಾಗಿತ್ತು. ಇಷ್ಟು ನೀರಿನಲ್ಲಿ ಆಂಧ್ರ ಪ್ರದೇಶಕ್ಕೆ 90 ಟಿಎಂಸಿ ತೆಲಂಗಾಣ, ತಮಿಳುನಾಡಿಗೆ ತಲಾ 60 ಟಿಎಂಸಿ ಹಂಚಿಕೆ ‌ಮಾಡಲಾಗಿತ್ತು. ಇದರಲ್ಲಿ ಕರ್ನಾಟಕಕ್ಕೆ ಹನಿ ನೀರು ಕೂಡ ಹಂಚಿಕೆ ಆಗಿರಲಿಲ್ಲ. ಮಾಜಿ ಪ್ರಧಾನಿಗಳಾದ ದೇವೇಗೌಡರು ಒತ್ತಾಯಿಸಿ ಹೋರಾಟ ಮಾಡಿದ ಫಲವಾಗಿ 15 ಟಿಎಂಸಿ ನೀರು ಹಂಚಿಕೆ ಆಗಿತ್ತು. ಆ ನೀರನ್ನು ಮಲಪ್ರಭ ಮೂಲಕ ನೀಡಿ ಅದನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಷರತ್ತು ವಿಧಿಸಿದ್ದರು. ವಾಸ್ತವ ಪರಿಸ್ಥಿತಿ ಹೇಗಿದ್ದಾರೆ ಕರ್ನಾಟಕ ಮೂರು ನದಿಗಳ ಜೋಡಣೆಗೆ ಸಮ್ಮತಿಸುತ್ತದೆ ಒಂದು ಲಕ್ಷ ಕೋಟಿ ವಿನಿಯೋಗ ಮಾಡಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಯಾವ ಆಧಾರದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಅಗ್ರಹಪಡಿಸಿದರು.

ಇದಿಷ್ಟು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಮಾತ್ರವಲ್ಲದೆ, ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಮುಖ್ಯಮಂತ್ರಿ ಅವರು ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಯ ಯೋಜನೆಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲಿದೆ ಎಂದು ಹೇಳಿದ್ದಾರೆ. ನದಿ ಜೋಡಣೆ ಆಗಲಿ, ನಮ್ಮದೇನು ತಕರಾರು ಇಲ್ಲ. ಆದರೆ ಈ ಯೋಜನೆಯ ಮೂಲಕ ಕರ್ನಾಟಕಕ್ಕೆ ಎಷ್ಟು ನೀರು ದೊರೆಯುತ್ತದೆ ಎಂಬುದನ್ನು ಅವರು ರಾಜ್ಯಕ್ಕೆ ತಿಳಿಸಬೇಕು ಎಂದು ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಈ ಬಗ್ಗೆ ಕೇಂದ್ರೀಯ ಜಲ ಆಯೋಗದ ಸಭೆ ನಡೆದಿದೆಯಾ? ರಾಷ್ಟ್ರೀಯ ಜಲ ಮಂಡಳಿಯ ಸಭೆಯಲ್ಲಿ ಚರ್ಚಿಸಿದ್ದೀರಾ? ಎಂದು ಮುಖ್ಯಮಂತ್ರಿಯನ್ನು ನೇರವಾಗಿ ಪ್ರಶ್ನಿಸಿದ ಕೇಂದ್ರ ಸಚಿವರು; ವಾಸ್ತವದಲ್ಲಿ ರಾಜ್ಯಕ್ಕೆ ಈ ಯೋಜನೆಯಲ್ಲಿ ನೀರೇ ಸಿಕ್ಕಿಲ್ಲ. ಸತ್ಯ ಹೀಗಿದ್ದರೆ ಮುಖ್ಯಮಂತ್ರಿ ಯೋಜನೆಗೆ ಸಮ್ಮತಿ ಹೇಗೆ ಕೊಡುತ್ತಾರೆ? ಯಾವ ಆಧಾರದಲ್ಲಿ ಅವರು ಕರ್ನಾಟಕದ ಸಮ್ಮತಿ ಇದೆ ಎಂದು ಹೇಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿ ರಾಜ್ಯದ ನೀರಾವರಿ ಹಿತಾಸಕ್ತಿ ವಿಚಾರದಲ್ಲಿ ಮಕ್ಕಳ ಆಟ ಆಡುತ್ತಿದ್ದಾರೆ. ಅಲ್ಲದೆ, ಕನ್ನಡಿಗರಿಗೆ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಮುಖ್ಯಮಂತ್ರಿಗೆ ಗೊತ್ತಿರಲಿ. ನದಿ ಜೋಡಣೆ ಮಾಡುವುದು, ನೀರು ಹಂಚಿಕೆ ಮಾಡುವುದು ಬೆಂಗಳೂರಿನಲ್ಲಿ ಕೂತು ರಿಯಲ್ ಎಸ್ಟೇಟ್ ಮಾಡಿದ ಹಾಗಲ್ಲ. ಇದು ಅತ್ಯಂತ ಸೂಕ್ಷ್ಮ ವಿಚಾರ, ಅತ್ಯಂತ ಜವಾಬ್ದಾರಿತವಾಗಿ ಹೇಳಿಕೆ ನೀಡಬೇಕು. ಈ ಮುಖ್ಯಮಂತ್ರಿಗೆ ಆ ರೀತಿಯ ಯಾವುದೇ ಜವಾಬ್ದಾರಿ, ಹೊಣೆಗಾರಿಕೆ ಗೊತ್ತಿದ್ದಂತೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಮುನ್ನ ಮುಖ್ಯಮಂತ್ರಿಗಳು ಆತುರಪಡಬಾರದು. ಸಲಹೆ ಪಡೆಯಬೇಕು, ಸಾಧ್ಯವಾದರೆ ವಿರೋಧ ಪಕ್ಷಗಳ ಮುಖಂಡರ ಜತೆ ಚರ್ಚೆ ಮಾಡಬಹುದಿತ್ತು. ಸದ್ಯಕ್ಕೆ ರೂಪಿಸಿರುವ ಕೃಷ್ಣಾ, ಗೋದಾವರಿ. ಕಾವೇರಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಉಪಯೋಗವಿಲ್ಲ. ಈ ಬಗ್ಗೆ ಮಾತನಾಡುವ ಕೂಲಂಕಶವಾಗಿ ಮಾಹಿತಿ ಪಡೆದುಕೊಂಡು ಮಾತನಾಡಿ ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ನೀರಿನ ಮಿತಿ ನಿಗದಿ ಆಗದೆ ಸಮ್ಮತಿ ಕೊಡಬೇಡಿ:

ಕೃಷ್ಣಾ, ಕಾವೇರಿ, ಗೋದಾವರಿ ನದಿಗಳ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ ಆಗುತ್ತದೆ ಎಂಬುದು ನಿರ್ಧಾರ ಆಗದೆ ಈ ಯೋಜನೆಗೆ ಹೇಗೆ ಸಮ್ಮತಿ ಕೊಡುತ್ತೀರಿ ಎಂದು ಸಿಎಂಗೆ ಪ್ರಶ್ನಿಸಿದ ಕೇಂದ್ರ ಸಚಿವರು; ಒಂದು ವೇಳೆ ನೀರು ಹಂಚಿಕೆ ಪ್ರಮಾಣ ನಿಗದಿಯಾಗದೆ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದೆ ಆದರೆ ಅದು ಕನ್ನಡಿಗರಿಗೆ ಮಾಡುವ ದೊಡ್ಡ ದ್ರೋಹ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೀರಿನ ಹಂಚಿಕೆಯ ಬಗ್ಗೆ ರಾಜ್ಯವು ವಿವಾದಗಳನ್ನು ಎದುರಿಸುತ್ತಿದೆ. ಹಲವಾರು ಪ್ರಕರಣಗಳಲ್ಲಿ ನಾವು ಕಾನೂನು ಹೋರಾಟ ನಡೆಸುತ್ತಿದ್ದೇವೆ. ಈ ಯೋಜನೆಗೆ ಸಂಬಂಧಿಸಿ ಕಾನೂನು ಹೋರಾಟ ಮಾಡಬೇಕು. ವಿಷಯ ಗೊತ್ತಿಲ್ಲದೆ ದಯವಿಟ್ಟು ಮಾತನಾಡಬೇಡಿ. ನಿಮ್ಮದೇ ಪಕ್ಷದ ನಾಯಕ ಹೆಚ್.ಕೆ.ಪಾಟೀಲ್ ಅವರು ‘ಕೃಷ್ಣಾ ಕಣ್ಣೀರ ಕಥೆ’ ಎನ್ನುವ ಪುಸ್ತಕ ಬರೆದಿದ್ದಾರೆ. ಅವರಿಗೆ ಎಲ್ಲಾ ಮಾಹಿತಿ ಗೊತ್ತಿದೆ. ಅವರ ಸಲಹೆಯನ್ನು ಪಡೆಯಿರಿ ಎಂದು ಸಚಿವರು ಹೇಳಿದರು.

ಪ್ರಗತಿ ಪರಿಶೀಲನಾ ನೆಪದಲ್ಲಿ ಮುಖ್ಯಮಂತ್ರಿ ಜಾಲಿ ಟ್ರಿಪ್ ಮಾಡುತ್ತಿದ್ದಾರೆ!!

ರಾಜ್ಯದ ಮುಖ್ಯಮಂತ್ರಿ ಪ್ರಗತಿ ಪರಿಶೀಲನೆ ಮತ್ತು ಎಸ್ ಐಆರ್ ನೆಪದಲ್ಲಿ ಎರಡು ದಿನ ಜಾಲಿ ಟ್ರಿಪ್ ಮಾಡುತ್ತಿದ್ದಾರೆ. ಕೇವಲ ಡಿನ್ನರ್ ಮೀಟಿಂಗ್ ಗಳನ್ನು ಮಾಡುವುದಕ್ಕೆ ಮುಖ್ಯಮಂತ್ರಿ ಟೂರ್ ಹೊಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಟೀಕಿಸಿದರು.

ರಾಜ್ಯದ ಮುಖ್ಯಮಂತ್ರಿ ಜನರ ಸಮಸ್ಯೆಗಳ ಬಗ್ಗೆ ಪ್ರವಾಸ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ರಾಜ್ಯ ಒಂದು ಕಡೆ ಬರ, ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಘಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಜಾಲರಿ ಟ್ರಿಪ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ಹಣವನ್ನು ಎಲ್ಲಿಂದ ತಂದು ಕೊಡುತ್ತಾರೆ, ಇದಕ್ಕೇನಾದರೂ ಕ್ರಿಯಾಯೋಜನೆ ರೂಪಿಸಿದ್ದಾರೆ ಎಂಬ ಬಗ್ಗೆ ಸಚಿವರು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗದ ಜನರು ಬರ ಮತ್ತು ನೆರೆ ಸಂಕಷ್ಟಕ್ಕೆ ಸಿಲುಕಿ ಬೇರೆ ಬೇರೆ ಕಡೆಗಳಿಗೆ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಇದರ ಪರಿವೇ ಇಲ್ಲದೆ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಸಾಲಮನ್ನಾ ಮಾಡಲು ಕಷ್ಟ ಎಂದು ಸಿಎಂ ಹೇಳಿದ್ದಾರೆ. ಇನ್ನೊಂದು ಕಡೆ ಚಿಂತನೆ ಮಾಡುತ್ತೇವೆ ಎನ್ನುತ್ತಾರೆ. ಬರದಿಂದ ಜನ ಗುಳೆ ಹೋಗ್ತಾ ಇದ್ದಾರೆ. ಸಿಎಂ ಗಾಣಗಾಪುರಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು. ಅಲ್ಲಿನ ಹೆಣ್ಣುಮಗಳು ಒಬ್ಬರು ಬರದ ದರ್ಶನ ಮಾಡಿಸಿದ್ದರು. ಉತ್ತರ ಕರ್ನಾಟಕದ ಹಳ್ಳಿಗಳು ಪರಿಸ್ಥಿತಿ ಏನಿದೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲ. ಬೆಳಗಾವಿಯಲ್ಲಿ 20 ಶಾಸಕರ ಜತೆ ಡಿನ್ನರ್ ಸಭೆ ಮಾಡಿದರು ಸಿಎಂ. ಆದರೆ ಜನರ ಊಟದ ಬಗ್ಗೆ ಮುಖ್ಯಮಂತ್ರಿ ಯಾವುದೇ ಆಶ್ವಾಸನೆ ನೀಡಲಿಲ್ಲ ಎಂದು ಕಿಡಿಕಾರಿದರು ಕುಮಾರಸ್ವಾಮಿ.

ಮುಖ್ಯಮಂತ್ರಿಗಳು ಕಲಬುರ್ಗಿಯಲ್ಲಿ ಪ್ರವಾಸ ಮಾಡಿದರು. ಬೀದರ್ ನಲ್ಲಿ ಅನುಭವ ಮಂಟಪ ದರ್ಶನ ಮಾಡಿ ಆ ಬಳಿಕ ಕಾಂಗ್ರೆಸ್ ಸಭೆ ಮಾಡಿದರು. ಕಲಬುರ್ಗಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅ ಸಭೆಗೆ ಮಾಧ್ಯಮಗಳಿಗೆ ಪ್ರವೇಶ ಇರಲಿಲ್ಲ. ಸಭೆಗಳನ್ನು ಗೌಪ್ಯವಾಗಿ ನಡೆಸುತ್ತಾರೆ. ಮಾಧ್ಯಮಗಳಿಗೆ ಏನೂ ಗೊತ್ತಾಗುವಂತೆ ಇಲ್ಲ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಬಗ್ಗೆ ಚರ್ಚೆ ಮಾಡಿದ್ದಾರೆ. ಅಧಿಕಾರಿಗಳಿಗೆ ಜನರ ಸಮಸ್ಯೆಗಳು ಕುರಿತಂತೆ ಆದೇಶಗಳನ್ನು ಕೊಡುವುದು ಬಿಟ್ಟು ಸರಿಯಾಗಿ ಎಸ್ ಐಆರ್ ನಡೆಸಿ ಎಂದು ಕಟ್ಟಪ್ಪಣೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರದಿಂದ ಜನರು ಕಂಗೆಟ್ಟಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ತಂಡೋಪ ತಂಡವಾಗಿ ಗುಳೆ ಹೊರಟಿದ್ದಾರೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಈ ಬಗ್ಗೆ ವರದಿಗಳನ್ನು ಬರೆದಿದ್ದಾರೆ. ನೆರೆಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿಯಾದವರಿಗೆ ಇದನ್ನು ಗೊತ್ತಿಲ್ಲವೆ? ಪ್ರತಿಯೊಂದು ನಾನೇ ಮುಂದು ಎಂದು ಕಾಲು ಕೆರೆದುಕೊಂಡು ಹೇಳಿಕೆ ನೀಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ಬಂದಿಲ್ಲವಾ? ಈ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ ಎಂದು ಅವರು ಕಿಡಿಕಿಡಿಯಾದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular