ಬೆಂಗಳೂರು: ನೌಕರರಿಗೆ ಪಾವತಿಸಬೇಕಾದ ಗ್ರ್ಯಾಚುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ, ಬಡ್ಡಿ ಹಣ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕೆಎಸ್ಆರ್ಟಿಸಿ ಮಂಡ್ಯ ವಿಭಾಗ ತನ್ನ ಮಾಜಿ ನೌಕರ ಚಂದ್ರಶೇಖರಾಚಾರಿ ಎಂಬುವರ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂತ್ ರಾಮನಾಥ ಹೆಗಡೆ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
1972ರ ಗ್ರ್ಯಾಚುಟಿ ಪಾವತಿ ಕಾಯ್ದೆ ಸೆಕ್ಷನ್ 4(6)ರ ಪ್ರಕಾರ ಸಂಸ್ಥೆಗೆ ನೌಕರನಿಂದ ತೀವ್ರ ಆರ್ಥಿಕ ನಷ್ಟವಾಗಿದ್ದರೆ ಅಥವಾ ನೌಕರರು ಸಮಾಜಘಾತಕ ನಡವಳಿಕೆಯಿಂದ ವಜಾಗೊಂಡಿದ್ದರೆ ಮಾತ್ರ ಗ್ರ್ಯಾಚುಟಿ ತಡೆಯಲು ಅವಕಾಶವಿದೆ. ಸಂಸ್ಥೆ ಹೊರಡಿಸುವ ಆಂತರಿಕ ಸುತ್ತೋಲೆಗಳು ಮೂಲ ಕಾಯ್ದೆಯ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ. ಮರು ಸೇರ್ಪಡೆಯಾದ ನೌಕರನಿಂದ ಬಡ್ಡಿ ವಸೂಲಿ ಮಾಡುವ ಸಂಸ್ಥೆಯ 2007ರ ಸುತ್ತೋಲೆ ಕಾನೂನು ಬದ್ಧವಾಗಿದ್ದರೂ ಆ ಬಡ್ಡಿ ಬಾಕಿಯನ್ನು ಶಾಸನಬದ್ಧವಾಗಿ ರಕ್ಷಿಸಲ್ಪಟ್ಟಿರುವ ಗ್ರ್ಯಾಚುಟಿ ಹಣದಿಂದ ಕಡಿತಗೊಳಿಸಲು ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸಂಸ್ಥೆಗೆ ನೌಕರನಿಂದ ಯಾವುದೇ ಬಡ್ಡಿ ಅಥವಾ ಬಾಕಿ ಬರಬೇಕಿದ್ದರೆ ಅದನ್ನು ಗ್ರ್ಯಾಚುಟಿ ಹೊರತುಪಡಿಸಿ ನೌಕರನಿಗೆ ಸಿಗಬೇಕಾದ ಇತರೆ ಸೌಲಭ್ಯಗಳಿಂದ ಅಥವಾ ಕಾನೂನುಬದ್ಧವಾದ ಇತರೆ ಮಾರ್ಗಗಳ ಮೂಲಕ ವಸೂಲು ಮಾಡಬಹುದಾಗಿದೆ. ಗ್ರ್ಯಾಚುಟಿ ಹಣವನ್ನು ಕಡಿತಗೊಳಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದ್ದು, ಕೆಎಸ್ಆರ್ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

