ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬೆಕ್ಕಿಗೂ ಟಿಕೆಟ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನಿಂದ ಮಡಿಕೇರಿಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬೆಕ್ಕಿಗೆ ಟಿಕೆಟ್ ನೀಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬಸ್ ಟಿಕೆಟ್ ಹಾಗೂ ಬೆಕ್ಕಿನ ಚಿತ್ರಗಳನ್ನು ಹಂಚಿಕೊಂಡಿರುವ ಸಾರಿಗೆ ಸಂಸ್ಥೆ ಹಾಗೂ ಬಸ್ ನಿರ್ವಾಹಕನ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ. ಡಿಸೆಂಬರ್ 26ರಂದು ಮೈಸೂರಿನಿಂದ ಮಡಿಕೇರಿಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬೆಕ್ಕಿಗೆ ಟಿಕೆಟ್ ನೀಡಲಾಗಿದೆ.
ಇನ್ಮುಂದೆ ಬಸ್ ನಲ್ಲಿ ಬೆಕ್ಕಿಗೂ ಪಾಸ್ ಸಿಗುತ್ತಾ? ಪ್ರಯಾಣಿಕ ಬೆಕ್ಕನ್ನು ಲಗೇಜ್ ಎಂದು ಪರಿಗಣಿಸಿದ್ದಾನಾ? ಬೆಕ್ಕಿಗೆ ಟಿಕೆಟ್ ಕೊಟ್ಟ ಉದ್ದೇಶವೇನು? ಬೆಕ್ಕು ಮಾಲೀಕನ ತೊಡೆಮೇಲೆ ಕುಳಿತು ಪ್ರಯಾಣಿಸುತ್ತಿತ್ತಲ್ಲ? ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣವಿರುವಾಗ ಬೆಕ್ಕಿಗೆ ಟಿಕೆಟ್ ನೀಡುದ್ದು ಎಷ್ಟು ಸರಿ? ಹೀಗೆ ತರಹೇವಾರಿ ಪ್ರಶ್ನೆಗಳನ್ನು ಮಾಡಿದ್ದಾರೆ.
ನಿಯಮಗಳ ಪ್ರಕಾರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೆಕ್ಕು ಅಥವಾ ನಾಯಿಗಳನ್ನು ಪ್ಯಾಕ್ಡ್ ವ್ಯವಸ್ಥೆಯಲ್ಲಿ ಸಾರಿಗೆ ಬಸ್ ಗಳಲ್ಲಿ ಕೊಂಡೊಯ್ಯಬಹುದು. ಸೀಟು ಖಾಲಿಯಿದ್ದರೆ ಅಥವಾ ಮಾಲೀಕ ತೊಡೆಯಮೇಲೆ ಕೂರಿಸಿಕೊಂಡರೆ ಟಿಕೆಟ್ ಪಡೆಯಬೇಕಿಲ್ಲ. ಆದರೆ ಸಾಕುಪ್ರಾಣಿಗಳನ್ನು ಸೀಟುಗಳಲ್ಲಿ ಕೂರಿಸಿಕೊಂಡು ಹೋಗಬೇಕು ಎಂದಿದ್ದರೆ ಅರ್ಧ ಟಿಕೆಟ್ ಪಡೆಯಬೇಕು. ಮಾಲೀಕ ಸೀಟು ಬಿಟ್ಟುಕೊಡಲು ಸಿದ್ಧನಿಲ್ಲ ಎಂದರೆ ನಾಅಯಿ ಅಥವಾ ಬೆಕ್ಕಿಗೆ ಟಿಕೆಟ್ ಪಡೆಯಬೇಕು ಎಂಬ ನಿಯಮವಿದೆ.

