ಉಡುಪಿ: ದೇಶಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕೃಷ್ಣ ಜನ್ಮಾಷ್ಟಮಿ ಎಂದರೆ ನೆನಪಿಗೆ ಬರುವುದೇ ಉಡುಪಿ ಶ್ರೀಕೃಷ್ಣ. ಕಡಗೋಲು ಹಿಡಿದ ಕೃಷ್ಣನ ನಾಡು ಉಡುಪಿ ಮಠದಲ್ಲಿ ಈ ಬಾರಿ ಇಂದು ಕೃಷ್ಣಜನ್ಮಾಷ್ಟಮಿ ಆಚರಣೆ ಇಲ್ಲ. ಇದರಿಂದ ಭಕ್ತರು ನಿರಾಶರಾಗಿದ್ದಾರೆ.
ಉಡುಪಿಯಲ್ಲಿ ಅಷ್ಟಮಿ ಸಂಭ್ರಮಕ್ಕೆ ಭಕ್ತರು ಇನ್ನೂ ಒಂದು ತಿಂಗಳು ಕಾಯಬೇಕು. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಇಡೀ ದೇಶದಲ್ಲೇ ಪ್ರಸಿದ್ಧಿ. ಆದರೆ ಈ ಬಾರಿ ಉಡುಪಿಯಲ್ಲಿ ಪ್ರತ್ಯೇಕವಾಗಿ ಅಷ್ಟಮಿ ಆಚರಣೆ ಮಾಡಲಾಗುತ್ತಿದೆ. ಕಾರಣ ಇಂದು ನಾಡಿನೆಲ್ಲೆಡೆ ಚಂದ್ರಮಾನ ಪದ್ಧತಿಯಂತೆ ಅಷ್ಟಮಿ ಆಚರಣೆ ಹಬ್ಬವನ್ನು ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಸೌರಮಾನ ಪದ್ಧತಿಯನ್ನು ಅನುಸರಿಸುವುದರಿಂದ ಇನ್ನೂ ಒಂದು ತಿಂಗಳು ಕಾಯಬೇಕು.
ಹುಣ್ಣಿಮೆ- ಅಮವಾಸ್ಯೆ ಗಣನೆಯಲ್ಲಿ ಇತರ ಭಾಗದಲ್ಲಿ ಆಚರಣೆ ನಡೆದರೆ, ತಮಿಳುನಾಡಿನ ಕರಾವಳಿಯಲ್ಲಿ ಸಂಕ್ರಮಣ ವಿಶೇಷ. ಹಾಗಾಗಿ ಈ ಬಾರಿ ಅಷ್ಟಮಿ ತಿಥಿಯ ಜೊತೆ ರೋಹಿಣಿ ನಕ್ಷತ್ರ ಸನ್ನಿಹಿತವಾಗಿರುವ ಸೆಪ್ಟೆಂಬರ್ 14ರಂದು ಅಷ್ಟಮಿ ಆಚರಣೆ ಮಾಡಲಾಗುತ್ತಿದೆ. ಇದನ್ನು ಶ್ರೀಕೃಷ್ಣ ಜಯಂತಿ ಎಂದು ಕರೆಯಲಾಗುತ್ತದೆ. ಹೀಗಾಗಿ ಕೃಷ್ಣನ ಊರಿನಲ್ಲಿ ಇಂದು ಅಷ್ಟಮಿ ಆಚರಣೆಯಿಲ್ಲ.
ಆದರೂ ಇಂದು ಚಂದ್ರಮಾನ ಪದ್ಧತಿಯಂತೆ ಹಬ್ಬ ಆಚರಣೆ ಮಾಡುವವರಿಗೆ ಕೃಷ್ಣ ಮಠ ಅವಕಾಶ ನೀಡಿದೆ. ಸಾಂಕೇತಿಕವಾಗಿ ಇಂದು ಕೂಡ ಅರ್ಗ್ಯ ಪ್ರಧಾನ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅಷ್ಟಮಿ ವೈಭವ ಮಾತ್ರ ಇಲ್ಲ. ಬಂದ ಭಕ್ತರು ಶ್ರೀ ಕೃಷ್ಣನ ದರ್ಶನ ಪಡೆದು ತೆರಳುತ್ತಿದ್ದಾರೆ. ಆದರೆ ರಥಬೀದಿಯಲ್ಲಿ ಎಂದಿನ ಅಷ್ಟಮಿಯಂತೆ ಬಾಲಕೃಷ್ಣ, ಮೊಸರು ಕುಡಿಕೆ ಸಂಭ್ರಮ, ಕೃಷ್ಣ ಉತ್ಸವ ಸಂಭ್ರಮ ಯಾವೂದು ಇಲ್ಲ. ಎಲ್ಲ ಆಚರಣೆಗಳು ಸೆಪ್ಟೆಂಬರ್ ನಲ್ಲಿ ನಡೆಯಲಿದೆ.