ಬೆಂಗಳೂರು: ಅನಧಿಕೃತ ಬಡಾವಣೆಗಳು ಇನ್ನಮುಂದೆ ತಲೆ ಎತ್ತಬಾರದು ಇದು ಸಿಎಂ ಸಿದ್ದರಾಮಯ್ಯನವರ ಕಟ್ಟುನಿಟ್ಟಿನ ಸೂಚನೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಅನಧಿಕೃತ ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಬೇಕು. ಈ ಸಂಬಂಧ ಸುಪ್ರಿಂ ಕೋರ್ಟ್ ಖಡಕ್ ಸೂಚನೆ ಕೂಡ ಇದೆ. ಹೀಗಾಗಿ ಇಂದು ಎಲ್ಲಾ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇನೆ ಇದಕ್ಕೆ ಬಗ್ಗದಿದ್ದರೆ ಎಲ್ಲಾ ಮೀರಿ ಅನಧಿಕೃತ ಲೇಔಟ್ ಮಾಡಿದ್ರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ತಿಳಿಸಿದರು.
ಎಲ್ಲಾ ಡಿಸಿಗಳು, ಸರ್ವೆ ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಆಗಿರುವ ಕೆಲಸ, ಮುಂದೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ನಿರಂತರ ಸಭೆ ನಡೆಸಿದ್ದೇನೆ. ರಾಜ್ಯದಲ್ಲಿ ಹಾಡಿ, ತಾಂಡಗಳು, ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗದೆ ಸೌಲಭ್ಯವಂಚಿತವಾಗಿದ್ದವು. ಕಂದಾಯ ಗ್ರಾಮಗಳ ಸ್ಥಾನಮಾನ ಈ ವಸತಿ ಪ್ರದೇಶಗಳಿಗೆ ಕೊಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಅದರ ಜೊತೆಗೆ ಶಾಶ್ವತ ಹಕ್ಕು ಪತ್ರ ನೀಡಿ ಅವರ ತ್ರಿಶಂಕು ಪರಿಸ್ಥಿತಿಗೆ ಪರಿಹಾರ ನೀಡಬೇಕಾಗಿದೆ ಎಂದರು.
2016-17 ರಲ್ಲಿ ಇದಕ್ಕೆ ಬೇಕಾದ ಕಾನೂನು ಮಾಡಿದ್ದೇವೆ. ನಾವು ನಮ್ಮ ಸರ್ಕಾರ ಬಂದಮೇಲೆ ಇದನ್ನ ಎಳೆದುಕೊಂಡ ಹೋಗಬಾರದೆಂದು ಈ ನಿರ್ದಾರ. 1.30 ಲಕ್ಷ ಮಂದಿಗೆ 94D ಭೂ ಕಂದಾಯ ಕಾಯ್ದೆಯಡಿ ಹಕ್ಕುಪತ್ರ ಕೊಡುವ ಕೆಲಸ ಆಗಿದೆ. ಮೇ 20 ರೊಳಗೆ ಒಂದು ಲಕ್ಷ ಹಕ್ಕು ಪತ್ರ ನೀಡಲು ತಯಾರಿ ನಡೆಸಲಾಗಿದೆ. ಈ ವರ್ಷಾಂತ್ಯದಲ್ಲಿ ಎರಡು ಲಕ್ಷ ಹಕ್ಕು ಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಹಕ್ಕುಪತ್ರ ಇದ್ದರೂ ಮೂಲದಾಖಲೆ ಇಲ್ಲ, ಒಂದೊಂದು ನಿವೇಶನಕ್ಕೆ ಇಬ್ಬರು ಮೂವರು ಹಕ್ಕುಪತ್ರ ಹೊಂದಿದ್ದಾರೆ. ಕೊಟ್ಟಿರುವ ಹಕ್ಕುಪತ್ರಗಳಿಗೂ ಮಾನ್ಯತೆ ಇಲ್ಲ. ಹೀಗಾಗಿ ಈ ಬಾರಿ ಡಿಜಿಟಲ್ ಹಕ್ಕುಪತ್ರ ಕೊಡುತ್ತಿದ್ದೇವೆ. ಇದರಿಂದ ಮೂಲ ದಾಖಲೆ ಕಳೆದುಹೋಗುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ನಕಲು ಮಾಡಲು ಸಾಧ್ಯವಾಗಲ್ಲ. ಡಿಜಿಟಲ್ ಹಕ್ಕು ಪತ್ರದ ಮೂಲಕ ನೂರಕ್ಕೆ ನೂರು ಶಾಶ್ವತ ಪರಿಹಾರ ಸಿಗುತ್ತೆ ಕ್ರಯ ಪತ್ರದ ಮೂಲಕ ನೋಂದಣಿ ಜೊತೆ ಸರ್ಕಾರದಿಂದಲೇ ಖಾತೆ ಮಾಡಿಸಿಕೊಡ್ತೇವೆ. ಕೋರ್ಟ್ ಕಛೇರಿಗೆ ಹೋಗಲು ಅವಕಾಶ ನೀಡದಂತೆ ಡಿಜಿಟಲ್ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.