ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಖಾತೆ ಹಂಚಿಕೆಯಾಗಿ ಹಲವು ದಿನಗಳ ಬಳಿಕ ಅಧಿಕಾರ ವಹಿಸಿಕೊಂಡಿರುವ ಸಚಿವ ಕೃಷ್ಣ ಬೈರೇಗೌಡ ಇಂದು ನಡೆದ ಇಲಾಖೆಯ ಮೊದಲ ಸಭೆಯಲ್ಲಿಯೇ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರದಹಿಕಾರ – ಜಿಬಿಎ ಅಧಿಕಾರಿಗಳ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಪ್ರಮುಖವಾಗಿ ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಕಸದ ವಿಚಾರವನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ? ನೆರೆ ರಾಜ್ಯಗಳಲ್ಲಿ ಗುಂಡಿಗಳಿಲ್ಲದ ರಸ್ತೆಗಳನ್ನು ನೋಡಿ ಎಂದು ಗರಂ ಆದರು.
ರಸ್ತೆ ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ ಆಗೋದಿಲ್ವಾ? ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ. ನೆರೆ ರಾಜ್ಯಗಳಲ್ಲಿ ಪಾತ್ ಹೋಲ್ ಇಲ್ಲದ ರಸ್ತೆಗಳನ್ನು ನೋಡಿ. ಸದಾ ಮಳೆ ಬೀಳುವಂತ ರಾಜ್ಯಗಳಲ್ಲೂ ರಸ್ತೆಗಳು ಚೆನ್ನಾಗಿ ಇವೆ. ನಿಮಗೆ ಯಾಕೆ ಉತ್ತಮ ರಸ್ತೆ ಮಾಡೋದಕ್ಕೆ ಆಗುತ್ತಿಲ್ಲ. ನಿಮಗೆ ಏನಾದರೂ ಕಡಿಮೆ ಬಜೆಟ್ ಕೊಟ್ಟಿದ್ದೇವಾ ಎಂದು ಜಿಬಿಎ ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಮೊದಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಬೈರೇಗೌಡ, ಇವತ್ತು ನಾನು ಬೆಂಗಳೂರಿನ ಅಧಿಕಾರಿಗಳೊಂದಿಗೆ ಐದು ನಗರ ಪಾಲಿಕೆ ಆಯುಕ್ತರೊಂದಿಗೆ ಸಭೆ ನಡೆಸಿದ್ದೇನೆ. ಇಲ್ಲೇ ಶಾಸಕನಾಗಿರುವುದರಿಂದ ನನಗೆ ಗೊತ್ತಿರೋದು ಇರುತ್ತೆ. ಕೆಲವೊಂದು ಆಡಳಿತಾತ್ಮಕ ವಿಚಾರಗಳು ನಾನು ತಿಳಿಯೋದು ಇರುತ್ತೆ . ಹಾಗಾಗಿ ಇವತ್ತಿನಿಂದ ಸಭೆ ಮೂಲಕ ಕೆಲಸ ಆರಂಭ ಮಾಡಿದ್ದೇನೆ. ಬೆಂಗಳೂರಿನ ಸಮಸ್ಯೆ ನಮಗೆಲ್ಲ ಗೊತ್ತಿರೋ ವಿಚಾರ. ಬೆಂಗಳೂರು ನಮ್ಮ ಇಡೀ ದೇಶ ಹಾಗೂ ಪ್ರಪಂಚಕ್ಕೆ ಬೇಕಾಗಿರೋ ಆಸ್ತಿ. ಬೆಂಗಳೂರಿನಲ್ಲಿ ವಾಸ ಮಾಡುವ ಒಂದೂವರೆ ಕೋಟಿ ಜನರಿಗೆ ಇದು ಆಶ್ರಯ ಆಗಿದೆ. ಇಲ್ಲಿ ವಾಸ ಮಾಡುವ ಒಂದೂವರೆ ಕೋಟಿ ಜನ ನಮಗೆ ಮುಖ್ಯ . ಇಲ್ಲಿ ವಾಸ ಮಾಡುವ ಜನರ ದೈನಂದಿನ ಜೀವನ ಸುಧಾರಣೆ ಆಗಬೇಕು. ರಸ್ತೆ,ಟ್ರಾಫಿಕ್, ಗಾರ್ಬೆಜ್, ಬೆಂಗಳೂರಿನ ಸೌಂದರ್ಯ, ಸ್ವಚ್ಚತ್ತೆ ಹೀಗೆ ಹಲವು ಸಮಸ್ಯೆಗಳಿವೆ . ಒಂದೇ ಬಿಬಿಎಂಪಿ ಇದ್ರೆ ಇವನೆಲ್ಲ ಸುಧಾರಣೆ ತರೋದು ಕಷ್ಟ ಅಂತ ಇದ್ದೀಗಾ ಐದು ನಗರ ಪಾಲಿಕೆ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಲಾಗಿದೆ. ಕಳೆದ ಮೂರು ವರ್ಷಗಳ ಸತತ ಪ್ರಯತ್ನದಿಂದ ಡಿಕೆ ಶಿವಕುಮಾರ್ ಲಾಂಗ್ ಟರ್ಮ್ ಯೋಜನೆಗಳಿಗೆ ರೂಪುರೇಷೆ ತಂದಿದ್ದಾರೆ. ಇಲ್ಲಿ ಬಹಳ ನುರಿತ ಅಧಿಕಾರಿಗಳು ಇದ್ದಾರೆ, ಎಕ್ಸ್ ಪರ್ಟ್ ಇಂಜಿನಿಯರ್ಸ್ ಇದ್ದಾರೆ ಎಂದರು.
ಕಸದ ವಿಚಾರದಲ್ಲಿ ಜನರು ಸಹಕಾರ ಕೊಡಬೇಕು. ವ್ಯವಸ್ಥೆಯಲ್ಲಿಯೂ ಲೋಪದೋಷ ಇದೆ. ಆದರೆ ಜನರ ಸಹಕಾರವೂ ಅಗತ್ಯ. ಎಲ್ಲವನ್ನ ಒಂದೇ ದಿನ ಮಾಡ್ತೇನೆಂದು ನಾನು ಹೇಳಿಲ್ಲ. ಕಸದ ಟೆಂಡರ್ ವಿಚಾರವಾಗಿ ಈಗಾಗಲೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಆ ಸಮಿತಿ ಎಲ್ಲವನ್ನೂ ಗಮನಿಸುತ್ತೆ. ಸಮಿತಿ ಏನಾದರೂ ಸಲಹೆ ಸೂಚನೆ ಕೊಟ್ಟರೆ ಪಾಲಿಸುತ್ತೇವೆ. ಸಮಿತಿ ಎಲ್ಲವನ್ನು ಪರಿಶೀಲನೆ ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಕೈಲಾದ ಮಟ್ಟಿಗೆ ಬೆಂಗಳೂರಿಗೆ ಅಳಿಲು ಸೇವೆ ಮಾಡುತ್ತೇವೆ. ರಸ್ತೆ ಗುಂಡಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನರ ಭಾವನೆ ನನಗೂ ಗೊತ್ತಿದೆ. ಸರಿಯಾಗಿ ರಸ್ತೆ ಗುಂಡಿಯನ್ನ ಮುಚ್ಚಬೇಕು. ರಸ್ತೆ ಗುಂಡಿ ಇಲ್ಲದ ಹಾಗೆ ರಸ್ತೆ ನಿರ್ಮಾಣ ಮಾಡಲು ಆಗಲ್ವಾ ಎಂದು ನಾನು ಅಧಿಕಾರಿಗಳಿಗೆ ಪ್ರಶ್ನೆ ಕೇಳಿದ್ದೇನೆ. ರಸ್ತೆಯನ್ನ ಸರಿಯಾಗಿ ನಿರ್ಮಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದರು.

