ಬೆಂಗಳೂರು-: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ಪರೀಕ್ಷಾ ನಿರ್ವಹಣೆಯ ಜವಾಬ್ದಾರಿಗೆ ನಿಯೋಜಿಸಿದೆ.
ಹೊಸ ಅಧಿಕಾರಿಗಳ ನೇಮಕ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಎಚ್. ಪ್ರಸನ್ನ ಅವರನ್ನು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರನ್ನಾಗಿ ಹಾಗೂ ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾವಿಶ್ ಓರ್ಡಿಯಾ ಅವರನ್ನು ಪರೀಕ್ಷೆಗಳ ಜಂಟಿ ನಿಯಂತ್ರಕರನ್ನಾಗಿ ನೇಮಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬೆಳವಣಿಗೆ ಕೆಪಿಎಸ್‌ಸಿ ಪರೀಕ್ಷೆಗಳ ಸುತ್ತ ನಿರಂತರವಾಗಿ ಕೇಳಿಬರುತ್ತಿರುವ ಅಕ್ರಮ, ಪಾರದರ್ಶಕತೆ ಹಾಗೂ ನಿರ್ವಹಣಾ ಲೋಪಗಳ ಆರೋಪಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ಪರೀಕ್ಷಾ ನಿಯಂತ್ರಕರಾಗಿದ್ದ ದಿಗ್ವಿಜಯ್ ಬೋಡ್ಕೆ ಅವರನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೋಡ್ಕೆ ಅವರು 2026ರ ಮಾನಿಂದ ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರಸನ್ನ ಅವರ ತಾಂತ್ರಿಕ ಕ್ರಮಗಳು
ಎಚ್. ಪ್ರಸನ್ನ ಅವರು ಕೆಇಎಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪ್ರವೇಶ ಮತ್ತು ನೇಮಕಾತಿ ಪರೀಕ್ಷೆಗಳ ನಿರ್ವಹಣೆಯಲ್ಲಿ ಹಲವು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಿದ್ದರು. 2025ರಲ್ಲಿ ಕೆಇಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಗುರುತಿನ ದೃಢೀಕರಣಕ್ಕಾಗಿ ಮೊಬೈಲ್ ಆಧಾರಿತ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ ಪ್ರಯೋಗಿಸಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ಒಎಂಆರ್ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಕ್ರಮವನ್ನೂ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗಿತ್ತು.
2026ರ ಕೆಸಿಇಟಿ ಪರೀಕ್ಷೆಯಲ್ಲಿಯೂ ಮುಖ ಗುರುತಿಸುವಿಕೆ, ಕ್ಯೂಆರ್ ಕೋಡ್ ಪರಿಶೀಲನೆ, ಸಿಸಿಟಿವಿ ಮತ್ತು ವೆಬ್‌ಕಾಸ್ಟಿಂಗ್‌ನಂತಹ ಕ್ರಮಗಳನ್ನು ಅಳವಡಿಸಲಾಗಿತ್ತು. 745 ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಲಾವಿಶ್ ಓರ್ಡಿಯಾ ಅವರನ್ನೂ ಕೆಪಿಎಸ್‌ಸಿ ಪರೀಕ್ಷೆಗಳ ಜಂಟಿ ನಿಯಂತ್ರಕರನ್ನಾಗಿ ನೇಮಿಸಿರುವುದು ಪರೀಕ್ಷಾ ನಿರ್ವಹಣೆಯಲ್ಲಿ ಹೆಚ್ಚುವರಿ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಯಾದಗಿರಿ ಜಿಲ್ಲಾಡಳಿತದ ಅಧಿಕೃತ ದಾಖಲೆಗಳಲ್ಲಿಯೂ ಅವರು ಐಎಎಸ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ದಾಖಲಾಗಿದೆ.
ಕೆಪಿಎಸ್‌ಸಿಯ ವಿಶ್ವಾಸಾರ್ಹತೆಗೆ ಸತತ ಸವಾಲು
ಕೆಪಿಎಸ್‌ಸಿ ವಿಶ್ವಾಸಾರ್ಹತೆಗೆ ಸತತ ಸವಾಲು
ಕೆಪಿಎಸ್‌ಸಿಗೆ ಹೊಸ ಪರೀಕ್ಷಾ ನಿಯಂತ್ರಕರ ನೇಮಕದ ಹಿಂದೆ ಕೇವಲ ಆಡಳಿತಾತ್ಮಕ ಬದಲಾವಣೆ ಮಾತ್ರವಲ್ಲ, ಪರೀಕ್ಷಾ ವ್ಯವಸ್ಥೆಯ ಮೇಲಿನ ಕುಸಿಯುತ್ತಿರುವ ವಿಶ್ವಾಸವನ್ನು ಪುನರ್‌ನಿರ್ಮಿಸುವ ಅಗತ್ಯವೂ ಇದೆ ಎಂಬ ಚರ್ಚೆ ಆರಂಭವಾಗಿದೆ.
2024ರ ಆಗಸ್ಟ್‌ನಲ್ಲಿ ನಡೆದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿನ ಕನ್ನಡ ಪ್ರಶ್ನೆಪತ್ರಿಕೆಯ ಅನುವಾದದ ದೋಷಗಳ ಕುರಿತು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರ ಮರುಪರೀಕ್ಷೆಗೆ ಆದೇಶಿಸಿದ ಬಳಿಕ ಡಿಸೆಂಬರ್ 2024ರಲ್ಲಿ ಮರುಪರೀಕ್ಷೆ ನಡೆದರೂ, ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ದೋಷಗಳ ಬಗ್ಗೆ ಮತ್ತೆ ಆಕ್ಷೇಪಗಳು ಕೇಳಿಬಂದಿದ್ದವು. 2025ರ ಫೆಬ್ರವರಿಯಲ್ಲಿ ಅಭ್ಯರ್ಥಿಗಳು ಫಲಿತಾಂಶ ತಡೆದು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ಇದಾದ ಬಳಿಕ 2025ರ ಮೇನಲ್ಲಿ ಗೆಜೆಟೆಡ್ ಪ್ರೊಬೇಷನರ್‌ಗಳ ಮುಖ್ಯ ಪರೀಕ್ಷೆಯ ಸಂದರ್ಭದಲ್ಲಿ ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಸೀಲ್ ಮಾಡಬೇಕಿದ್ದ ಪ್ರಶ್ನೆಪತ್ರಿಕೆಗಳ ಬಂಡಲ್ ತೆರೆದ ಸ್ಥಿತಿಯಲ್ಲಿ ಕಂಡುಬಂದಿದ್ದರಿಂದ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಕೆಪಿಎಸ್‌ಸಿ ಸ್ಪಷ್ಟನೆ ನೀಡಿದ್ದರೂ, ಘಟನೆ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

