ಬೆಂಗಳೂರು: ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮತಿ ನೀಡಿದ್ದಾರೆ.
ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಕೆಪಿಎಸ್‌ಸಿ ನಡೆಸಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಉತ್ತರವನ್ನು ಸೋರಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಡಿ.ಕೆ.ಶಿವಕುಮಾರ್ ಅನುಮತಿ ನೀಡಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಬಸವರಾಜ್ ಕನ್ನಾಳೆಗೆ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಪ್ರಶ್ನೆ ಪತ್ರಿಕೆ ನೀಡಿದ್ದರು. 1.50 ಕೋಟಿ ಲಂಚವನ್ನು ಮುಂಗಡವಾಗಿ ಸಂಗ್ರಹಿಸಿದ್ದ ಕನ್ನಾಳೆ. ಈ ಹಣದ ಪೈಕಿ 1.30 ಕೋಟಿ ಹಣವನ್ನು ಜ್ಞಾನೇಂದ್ರ ಕುಮಾರ್ ಗೆ ಪಾವತಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಈ ಬೃಹತ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ.
ಕೆಪಿಎಸ್ ಸಿ ಹಗರಣದಲ್ಲಿ ಈಗಾಗಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಅವರು ತಮ್ಮ ಹುದ್ದೆಯಿಂದ ಅಮಾನತುಗೊಂಡಿದ್ದರು.
ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಇಡಿ ತನಿಖೆಗೆ ಒಳಪಡಿಸಿತ್ತು. ಅವರ 14 ದಿನಗಳ ಕಸ್ಟಡಿ ಅವಧಿ ಮುಕ್ತಾಯಗೊಂಡ ಬಳಿಕ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಜ್ಞಾನೇಂದ್ರ ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ ಗಂಭೀರ ಆರೋಪ ಜ್ಞಾನೇಂದ್ರ ಕುಮಾರ್ ಮೇಲಿದೆ. ಜ್ಞಾನೇಂದ್ರ ಕುಮಾರ್ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮತ್ತು ಬಸವರಾಜ್ ಕನ್ನಾಳೆ ಪಿತೂರಿ ನಡೆಸಿ ಸೋರಿಕೆ ಮಾಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಇ ಡಿ ತನಿಖೆಯಿಂದ ಬಹಿರಂಗಗೊಂಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಕನ್ನಾಳೆಯು 1.50 ಕೋಟಿ ರೂ. ಲಂಚವನ್ನು ಮುಂಗಡವಾಗಿ ಸಂಗ್ರಹಿಸಿದ್ದನು. ಈ ಹಣದ ಈ ಪೈಕಿ 1.30 ಕೋಟಿಯನ್ನು ಗಂಗ್ವಾರ್‌ಗೆ ನಗದಿನ ರೂಪದಲ್ಲಿ ಪಾವತಿಸಲಾಗಿದೆ. ಈ ಹಣದಲ್ಲಿ ಕೆಪಿಎಸ್‌ಸಿ ಮಾಜಿ ಅಧಿಕಾರಿಗೆ 23 ಲಕ್ಷದಲ್ಲಿ ಚಿನ್ನಾಭರಣ ಖರೀದಿಸಲಾಗಿದೆ ಎಂದು ಇ ಡಿ ಆರೋಪಿಸಿದೆ.
ಜನವರಿ 9ರಂದು ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಉತ್ತರವನ್ನು ಗಂಗ್ವಾರ್ ಅವರು ಜನವರಿ 7ರಂದು ಪ್ರಕರಣದ ಕಿಂಗ್ ಪಿನ್ ಕನ್ನಾಳೆಗೆ ಎಚ್‌ಪಿ ಪೆನ್‌ಡ್ರೈವ್ ಮೂಲಕ ನೀಡಿದ್ದರು ಎಂಬುದು ಆರೋಪವಾಗಿದೆ.
ಕೆ.ಪಿ.ಎಸ್.ಸಿ ಬಳಿಕ ಇದೀಗ ಕೆ.ಎಸ್.ಒ.ಯು ಸರದಿ: ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ: ಪರೀಕ್ಷೆ ಬಳಿಕ ಹಣ ವಸೂಲಿ
ಶಿವಮೊಗ್ಗ: ಕೆ.ಪಿ.ಎಸ್.ಸಿ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ತನಿಖೆ ಹಂತದಲ್ಲಿರುವಾಗಲೇ ಮತ್ತೊಂದು ಪರೀಕ್ಷಾ ಅಕ್ರಮ ಬೆಳಕಿಗೆ ಬಾಂದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷೆಯಲ್ಲಿ ಮಾಸ್ ಕಾಪಿಗೆ ಅವಕಾಶ ನೀಡಲಾಗಿದೆ.
ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪವಿರುವ ಕೆ.ಎಸ್.ಓ.ಯು ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪರೀಕ್ಷೆಗಳು ನಡೆಯುತ್ತಿದೆ. ಈ ವೇಳೆ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗಿದೆ. ಅಕ್ಟೋಬರ್ 7ರಿಂದ ಆರಂಭವಾಗಿರುವ ಮುಕ್ತ ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳು ನವೆಂಬರ್ 20ರವರೆಗೆ ನಡೆಯಲಿವೆ.
ಹಣ ಕೊಟ್ಟರೇ ಮೊಬೈಲ್, ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಕೆ.ಎಸ್.ಓ.ಯು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ನೇತೃತ್ವದಲ್ಲಿ ಹಣ ಪಡೆದು ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಣ ಕೊಟ್ಟು ಪರೀಕ್ಷೆಯನ್ನು ಹೇಗೆ ಬೇಕಾದರೂ ಬರೆಯಬಹುದು, ಹಣ ಕೊಟ್ಟವರಿಗೆ ಪುಸ್ತಕ ಮತ್ತು ಮೊಬೈಲ್ ಇಟ್ಟುಕೊಂಡೇ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ ನೀಡಿದವರಿಗೆ ಎರಡನೇ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಹಣ ನೀಡದವರಿಗೆ ಮೊದಲ ಫ್ಲೋರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತಿದೆ.
ವಿದ್ಯಾರ್ಥಿಗಳು ಪುಸ್ತಕ ಹಾಗೂ ಮೊಬೈಲ್ ನೋಡಿ ಪರೀಕ್ಷೆ ಬರೆಯುತ್ತಿರುವ ಸಾಮೂಹಿಕ ನಕಲು ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸಿಬ್ಬಂದಿಯನ್ನು ಮುಂದೆ ಬಿಟ್ಟು ಹಣ ಸಂಗ್ರಹಿಸಿ, ಮುಕ್ತವಾಗಿ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ.
ಪರೀಕ್ಷೆ ಆರಂಭವಾದ ಅರ್ಧ ಗಂಟೆ ಬಳಿಕ ವಿದ್ಯಾರ್ಥಿಗಳ ಲೆಕ್ಕ ಮಾಡಲು ಪ್ರಾದೇಶಿಕ ನಿರ್ದೇಶಕ ಸ್ವಾಮಿ ಅವರು ಬರುತ್ತಿದ್ದರು. ಅದೇ ಸಮಯದಲ್ಲಿ ಪರೀಕ್ಷಾ ಕೇಂದ್ರದ ಪ್ರತ್ಯೇಕ ಕೊಠಡಿಯಲ್ಲಿ ಖುದ್ದಾಗಿ ನಿಂತು ಅವರು ಸಾಮೂಹಿಕ ನಕಲು ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಳಿಕ ಎಸ್ ಡಿಸಿಗಳಾದ ವಿನಯಾ ಕೆ.ಜೆ., ನಿಂಗಾ ನಾಯ್ಕ್, ಅಟೆಂಡರ್ ಯೋಗೇಶ್ ಗೌಡ ಹಾಗೂ ಡಾಟಾ ಎಂಟ್ರಿ ಆಪರೇಟರ್ ಹರೀಶ್ ಅವರನ್ನು ಮುಂದೆ ಬಿಟ್ಟು ಹಣ ವಸೂಲಿ ಮಾಡಿಸಲಾಗುತ್ತದೆ.
ಒಂದು ವಿಷಯಕ್ಕೆ ಒಂದು ಸಾವಿರ ರೂ.ನಂತೆ ಓರ್ವ ವಿದ್ಯಾರ್ಥಿಯಿಂದ ಹಣ ವಸೂಲಿ ಮಾಡುತ್ತಿರುವ ಆರೋಪವಿದ್ದು, ಪ್ರತಿನಿತ್ಯ 70 ರಿಂದ 100 ವಿದ್ಯಾರ್ಥಿಗಳ ಬಳಿ ಪರೀಕ್ಷೆ ಮುಗಿದ ಬಳಿಕ ಹಣ ವಸೂಲಿ ಮಾಡಲಾಗುತ್ತಿದೆ. ಪರೀಕ್ಷೆ ಬರೆದ ನಂತರ ಅಲ್ಲೇ ವಿದ್ಯಾರ್ಥಿಗಳಿಂದ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

