ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಎರಡು ದಿನದ ವಿಚಾರಣೆಯ ಬಳಿಕ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಅವರನ್ನು ಬಂಧಿಸಲಾಗಿದೆ.
ನಿನ್ನೆ ದಿನವಿಡಿ ಅವರು ಸಿಐಡಿ ವಿಚಾರಣೆ ಎದುರಿಸಿದ್ದರು. ಪಶುವೈದ್ಯಾಧಿಕಾರಿಗಳ ನೇಮಕದ ಅಕ್ರಮದ ದಾಖಲೆಗಳನ್ನು ಮುಂದಿಟ್ಟು ಜ್ಞಾನೇಂದ್ರ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಧ್ಯರಾತ್ರಿ ಸಿಐಡಿ ಪೊಲೀಸರು ಜ್ಞಾನೇಂದ್ರ ಕುಮಾರ್ ಅವರನ್ನು ಬಂಧಿಸಿದ್ದಾರೆ. ಎರಡು ದಿನ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಜ್ಞಾನೇಂದ್ರಕುಮಾರ್ ಅವರನ್ನು ಸಿಐಡಿ ಬಂಧಿಸಿದೆ. 2 ದಿನ ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಜ್ಞಾನೇಂದ್ರ ಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಸಿಐಡಿ ಅಧಿಕಾರಿ ರಾಘವೇಂದ್ರ ಹೆಗಡೆ ವಿಚಾರಣೆ ನಡೆಸಿದ್ದರು
10 ದಿನಗಳಿಂದ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ಜ್ಞಾನೇಂದ್ರ ಕುಮಾರ್ ಶುಕ್ರವಾರ ಏಕಾಏಕಿ ಸಿಐಡಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದು, ವಿಚಾರಣೆ ಎದುರಿಸಿದರು. ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಗುರುವಾರವೇ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಗೈರಾಗಿದ್ದರು. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿಯಾಗುತ್ತಿದ್ದಂತೆ ಆಗಸ್ಟ್ 18ರಿಂದ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದರು. ಪಶುವೈದ್ಯಾಧಿಕಾರಿಗಳ ಪರೀಕ್ಷೆ ನಡೆದಾಗ ಜ್ಞಾನೇಂದ್ರ ಕುಮಾರ್ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದರು. ಈ ವೇಳೆ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿತ್ತು. ಆದ್ದರಿಂದ ಅಕ್ರಮದಲ್ಲಿ ಇವರ ಹೆಸರು ಕೇಳಿಬಂದಿತ್ತು. ಜತೆಗೆ ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಕೆಲವೊಂದು ಲೋಪದೋಷಗಳನ್ನು ಎಸಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

