ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಜಾರಿ ನಿರ್ದೇಶನಾಲಯ (ED) ಜೈಲಿನಲ್ಲೇ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ತನ್ನ ಕಸ್ಟಡಿಗೆ ಪಡೆದಿದೆ .
ಜೈಲಿನಲ್ಲೇ ಮೂರು ದಿನ ವಿಚಾರಣೆ
KPSC ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ED ಅಧಿಕಾರಿಗಳು ಈಗಾಗಲೇ ಸುಮಾರು ಮೂರು ದಿನಗಳ ಕಾಲ ಜೈಲಿನಲ್ಲೇ ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆಗೆ ಇಬ್ಬರೂ ಸಹಕಾರ ನೀಡಿಲ್ಲ ಎಂಬ ಹಿನ್ನೆಲೆಯಲ್ಲಿ ED ಅಧಿಕಾರಿಗಳು ಜೈಲಿನಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಂಧನದ ಬಳಿಕ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ED ಕಸ್ಟಡಿಗೆ ಪಡೆದಿದೆ.
KPSC ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ
ಈ ಪ್ರಕರಣವು KPSC ನಡೆಸಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದೆ. CID ತನಿಖೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಒದಗಿಸುವುದು ಹಾಗೂ OMR ಉತ್ತರ ಪತ್ರಿಕೆಗಳಲ್ಲಿ ಅಕ್ರಮವಾಗಿ ಬದಲಾವಣೆ ಮಾಡಿದ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.
ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು 2024ರಿಂದ ಮಾರ್ಚ್ 2026ರವರೆಗೆ KPSC ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಬಸವರಾಜ್ ಕನ್ನಾಳೆ ಅವರನ್ನು ಪ್ರಕರಣದಲ್ಲಿ ಮಧ್ಯವರ್ತಿ ಎಂಬ ಆರೋಪದಡಿ CID ಬಂಧಿಸಿತ್ತು.
ಹಣದ ವ್ಯವಹಾರದ ಮೇಲೂ ED ಕಣ್ಣು
ನೇಮಕಾತಿ ಅಕ್ರಮದ ಮೂಲಕ ಸಂಗ್ರಹಿಸಲಾಗಿದೆ ಎನ್ನಲಾದ ಹಣದ ಮೂಲ, ಹಣ ಯಾರಿಗೆ ತಲುಪಿದೆ ಮತ್ತು ಅದನ್ನು ಆಸ್ತಿ ಸೇರಿದಂತೆ ಯಾವೆಲ್ಲೆಡೆ ಹೂಡಿಕೆ ಮಾಡಲಾಗಿದೆ ಎಂಬ ಬಗ್ಗೆಯೂ ED ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 400ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
KPSC ನೇಮಕಾತಿ ಹಗರಣದ ತನಿಖೆ ಇದೀಗ CID ಜೊತೆಗೆ ED ಹಂತದಲ್ಲೂ ಮುಂದುವರಿದಿದ್ದು, ಹಣದ ವಹಿವಾಟು ಮತ್ತು ಆಸ್ತಿ ಸಂಬಂಧಿತ ದಾಖಲೆಗಳ ಪರಿಶೀಲನೆಗೆ ತನಿಖಾ ಸಂಸ್ಥೆಗಳು ಮುಂದಾಗಿವೆ.
ಬಸವರಾಜ್ ಕನ್ನಾಳೆ
ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ಅಧಿಕಾರಿಗಳು ಇತ್ತೀಚೆಗೆ ಬಂಧಿಸಿದ್ದರು.ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿಯಾಗಿರುವ ಬಸವರಾಜ್ ಕನ್ನಾಳೆ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ಬಳಿಕ ಬಂಧಿಸಿದ್ರು. ನಂತರ ಭಾಲ್ಕಿಯ ಡೋಣಗಾಪುರ ಗ್ರಾಮದಲ್ಲಿರುವ ಅವರ ಮನೆ ಹಾಗೂ ಭಾಲ್ಕಿ ನಗರದ ಲೆಕ್ಚರರ್ ಕಾಲನಿಯಲ್ಲಿರುವ ನಿವಾಸದಲ್ಲೂ ಸಿಐಡಿ ಅಧಿಕಾರಿಗಳು ಶೋಧ ನಡೆಸಿದ್ದರು.
ಬಸವರಾಜ್ ಕನ್ನಾಳೆ ಅವರು 2025ರಿಂದ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಐಡಿ ಮತ್ತಷ್ಟು ಚುರುಕುಗೊಳಿಸಿದ್ದು, ನೇಮಕಾತಿ ಅಕ್ರಮದಲ್ಲಿ ಅವರ ಪಾತ್ರದ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
ಇದೇ ಪ್ರಕರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಹಿಂದಿನ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನೂ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.. ಕೆಪಿಎಸ್ಸಿ ಮೂಲಕ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಹಗರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.

