ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಶುತ್ತಿರುವ ಸಿಐಡಿ ಅಧಿಕಾರಿಗ ಮುಂದೆ ಆರು ಅಭ್ಯರ್ಥಿಗಳು ತಪ್ಪೊಪ್ಪಿಕೊಂಡಿದ್ದು, ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.
ಸಿಐಡಿ ತನಿಖೆಯ ವೇಳೆ ಸುಹೇಲ್ ಸೇರಿದಂತೆ ಒಟ್ಟು 6 ಜನ ಅಭ್ಯರ್ಥಿಗಳು ಹಣ ನೀಡಿ ಅಕ್ರಮವಾಗಿ ಪರೀಕ್ಷೆ ಬರೆದಿರುವುದಾಗಿ ಹೇಳಿಕೆ ನೀಡಿದ್ದಾರೆ. ಸುಮಾರು 400 ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ, ಒಂದು ಹುದ್ದೆಗೆ ಬರೋಬ್ಬರಿ 40 ಲಕ್ಷ ರೂಪಾಯಿಗೆ ಡೀಲ್ ಕುದುರಿಸಲಾಗಿತ್ತು ಎಂದು ಅಭ್ಯರ್ಥಿ ಮೊಹಮ್ಮದ್ ಸುಹೇಲ್ ಬಾಯ್ಬಿಟ್ತಿದ್ದಾನೆ.
ಬೆಂಗಳೂರಿನ ರಾಜಾಜಿನಗರದಲ್ಲಿದ್ದ ಕಚೇರಿಯೊಂದರಲ್ಲಿ ಈ ಡೀಲ್ ನಡೆದಿದ್ದು, ವಾಟ್ಸಾಪ್ ಮೂಲಕ ವ್ಯವಹಾರ ನಡೆಸಿ ಮುಂಗಡವಾಗಿ 20 ಲಕ್ಷ ರೂ. ಹಣ ಪಾವತಿಸಲಾಗಿತ್ತು ಎಂದು ಸಿಐಡಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ.
ಪರೀಕ್ಷೆಗೂ ಮುಂಚೆಯೇ ಅಭ್ಯರ್ಥಿಗಳ ಕೈಗೆ ಪ್ರಶ್ನೆಪತ್ರಿಕೆ ತಲುಪಿತ್ತು. ಅಭ್ಯರ್ಥಿಗಳು ಸಾಮಾನ್ಯ ಪರೀಕ್ಷಾ ಕೇಂದ್ರಗಳ ಬದಲಾಗಿ ಬೆಂಗಳೂರಿನ ರೆಸಾರ್ಟ್, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ಕುಳಿತು ಪರೀಕ್ಷೆ ಬರೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಮಗ್ರ ಅಕ್ರಮ ಜಾಲದಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಅಭ್ಯರ್ಥಿಗಳು ಸಿಐಡಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಈ ನಡುವೆ ಸಿಐಡಿಯಿಂದ ಬಂಧಿಸಲ್ಪಟ್ಟಿರುವ ಬಸವರಾಜ್ ಕಿನ್ನಾಳೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳುರಿನ ಸಂಜಯ್ ನಗರದಲ್ಲಿರುವ ಬಸವರಾಜ್ ಕಿನ್ನಾಳೆ ಮನೆಯನ್ನು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಅಧಿಕಾರಿಗಳು ಸೀಜ್ ಮಾಡಿದ್ದು, ಇದೇ ಮನೆಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಡೀಲ್ ಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ.

