ಕೊಪ್ಪಳ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಸಾಂಗ್ ಬಂದ್ ಮಾಡಿದ್ದಕ್ಕೆ ಪೊಲೀಸರ ಕ್ರಮ ಖಂಡಿಸಿ ಯುವಕರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಗಾಂಧಿ ಸರ್ಕಲ್ ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಪೊಲೀಸರು ಡಿಜೆ ಬಂದ್ ಮಾಡಲು ಮುಂದಾಗಿದ್ದಾರೆ. ಛಲವಾದಿ ಓಣಿಯ ಯುವಕ ಮಂಡಳಿವತಿಯಿಂದ ಗಣೇಶ ಮೂರ್ತಿ ಮೆರವಣಿಗೆ ಗಣೇಶ ವೃತ್ತದವರೆಗೆ ಬರುವವರೆಗೆ ಮಧ್ಯರಾತ್ರಿ ಎರಡು ಗಂಟೆ ಸಮಯವಾಗಿದ್ದರಿಂದ ಡಿಜೆ ಬಂದ್ ಮಾಡಿ ಗಣೇಶ ವಿಸರ್ಜನೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಯುವಕರು ಡಿಜೆ ಹಾಕಿಕೊಂಡು ಡಾನ್ಸ್ ಮಾಡಲು ಮುಂದಾಗಿದ್ದಾರೆ
ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಾರೆ. ಇದನ್ನು ಖಂಡಿಸಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಮನವೊಲಿಕೆಗೂ ಯುವಕರು ಒಪ್ಪದಿದ್ದಾಗ ಪರಿಸ್ಥಿತಿ ಕೈಮೀರುತ್ತಿದ್ದಂತೆ ಲಘು ಲಾಠಿಚಾರ್ಜ್ ಮಾಡಿದ್ದಾರೆ. ಕೆಲ ಸಮಯದ ಬಳಿಕ ಮತ್ತೆ ಯುವಕರು ಪ್ರತಿಭಟನೆ ನಡೆಸಿ ಪೊಲೀಸರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಡಿಜೆ ಹಾಕದೇ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತೆ ಸೂಚಿಸಿದ್ದು, ಬಿಗಿ ಪೊಲೀಸ್ ಭದ್ರತೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ.