HomeKarnatakaಸರ್ಕಾರದ ಆದೇಶದಂತೆ ಈ ತಿಂಗಳಲ್ಲೇ ಪಡಿತರ ಚೀಟಿದಾರರು ಇ-ಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಲು ಸೂಚನೆ

ಸರ್ಕಾರದ ಆದೇಶದಂತೆ ಈ ತಿಂಗಳಲ್ಲೇ ಪಡಿತರ ಚೀಟಿದಾರರು ಇ-ಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಲು ಸೂಚನೆ

ಎಲ್ಲಾ ಪಡಿತರ ಚೀಟಿದಾರರು ಸೆಪ್ಟೆಂಬರ್ ಮಾಹೆಯಲ್ಲಿ ತಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 7,38,156 ಫಲಾನುಭವಿಗಳ ಪೈಕಿ ಇದುವರೆಗೆ ಕೇವಲ 3,720 ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಂಡಿದ್ದು, ಉಳಿದ 7,34,436 ಫಲಾನುಭವಿಗಳು ಇನ್ನೂ ಇ-ಕೆವೈಸಿ ಮಾಡಿಸಬೇಕಿದೆ. ಬಾಕಿ ಇರುವ ಫಲಾನುಭವಿಗಳ ಪಟ್ಟಿಯನ್ನು ಆಯಾ ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ನೀಡಲಾಗಿದ್ದು, ಗ್ರಾಹಕರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಖುದ್ದಾಗಿ ಭೇಟಿ ನೀಡಿ, ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ಶುಲ್ಕ ನೀಡುವಂತಿಲ್ಲ. ಸೆಪ್ಟೆಂಬರ್ 30 ಕೊನೆಯ ದಿನವಾಗಿರುತ್ತದೆ. ಪಡಿತರ ಚೀಟಿದಾರರು ನಿಗದಿತ ದಿನಾಂಕದೊಳಗೆ ತಪ್ಪದೇ ಇ-ಕೆವೈಸಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಮುಂದುವರಿಸಿಕೊಳ್ಳಬೇಕಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲಾವಿದರ ಗುರುತಿನ ಚೀಟಿಗಾಗಿ ಅರ್ಜಿ ಆಹ್ವಾನ: ಸೆ. 30 ಕೊನೆ ದಿನ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಅರ್ಹ ಕಲಾವಿದರಿಗೆ ‘ಕಲಾವಿದರ ದತ್ತಾಂಶ ಯೋಜನೆ’ಯಡಿ ಗುರುತಿನ ಚೀಟಿ ವಿತರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.

ಸಾಹಿತ್ಯ, ರಂಗಭೂಮಿ, ಜಾನಪದ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ಇತ್ಯಾದಿಕಲಾ ಕಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿಲ್ಲೆಯ ಅರ್ಹ ಕಲಾವಿದರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಇದೇ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು, ಆಸಕ್ತ ಕಲಾವಿದರು ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ‘ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ’ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಈ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಡು ಮತದಾರರ ಪಟ್ಟಿ ಪ್ರಕಟಣೆ; ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳ ಸಭೆ

ಕೊಪ್ಪಳ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ(ಎಸ್.ಐ.ಆರ್) ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.

ಇದೇ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 01.10.2026ರ ಅರ್ಹತಾ ದಿನಾಂಕಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ದಿನಾಂಕ 24.08.2026 ರಂದು ಪ್ರಕಟಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 24.08.2026 ರಿಂದ 23.09.2026 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, 27.10.2026 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದರು.

ಈಗಾಗಲೇ ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿದ್ದಾರೆ. ಜಿಲ್ಲೆಯ ಒಟ್ಟು 11,90,214 ಮತದಾರರ ಪೈಕಿ 10,41,388 (ಶೇ. 87.50) ಮತದಾರರ ವಿವರಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಹೇಳಿದರು.

ಕರಡು ಪಟ್ಟಿಯ ಅಂಕಿ-ಅಂಶ: ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ 5,19,142 ಪುರುಷರು, 5,22,189 ಮಹಿಳೆಯರು ಹಾಗೂ 57 ಇತರೆ ಸೇರಿದಂತೆ ಒಟ್ಟು 10,41,388 ಮತದಾರರಿದ್ದಾರೆ. ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳ ರಾಷನಲೈಜೇಷನ್ ಪ್ರಕ್ರಿಯೆ ನಡೆಸಿ, ಜಿಲ್ಲೆಯಲ್ಲಿ ಹೊಸದಾಗಿ 37 ಮತಗಟ್ಟೆಗಳನ್ನು ಹೆಚ್ಚಿಸಲಾಗಿದ್ದು, ಇದರಿಂದಾಗಿ ಒಟ್ಟು ಮತಗಟ್ಟೆಗಳ ಸಂಖ್ಯೆ 1,315 ರಿಂದ 1,352ಕ್ಕೆ ಏರಿಕೆಯಾಗಿದೆ ಎಂದರು.

ನೋಟಿಸ್ ಜಾರಿ ಮತ್ತು ವಿಚಾರಣೆ: ಹಿಂದಿನ ಸಮಗ್ರ ಪರಿಷ್ಕರಣೆಯ ಮಾಹಿತಿಯನ್ನು ನೀಡದ ಹಾಗೂ ಮಾಹಿತಿ ತಾಳೆಯಾಗದ ಅಥವಾ ಲೋಪದೋಷಗಳು ಕಂಡುಬಂದಿರುವ 14,401 ಮತದಾರರಿಗೆ ನೋಟಿಸ್ ನೀಡಲಾಗುತ್ತಿದ್ದು, ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆಗೆ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಇಆರ್‌ಒ/ಎಇಆರ್‌ಒ ಕಚೇರಿಗಳು, ಮತಗಟ್ಟೆಗಳು ಹಾಗೂ ವೆಬ್‌ಸೈಟ್ https://koppal.nic.in/en/election/ ನಲ್ಲಿ ಪ್ರಚುರಪಡಿಸಲಾಗಿರುತ್ತದೆ. ಹೆಸರು ಸೇರ್ಪಡೆಗೆ ನಮೂನೆ-6, ಹೆಸರು ತೆಗೆದು ಹಾಕಲು ನಮೂನೆ-7 ಮತ್ತು ತಿದ್ದುಪಡಿ ಅಥವಾ ಸ್ಥಳಾಂತರಕ್ಕೆ ನಮೂನೆ-8ರ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಜಿಲ್ಲಾ ಚುನಾವಣಾ ತಹಶೀಲ್ದಾರರಾದ ರವಿ ವಸ್ತ್ರದ್, ಜಿಲ್ಲೆಯ ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ, ಸೇರಿದಂತೆ ಮತ್ತಿತರರು ಹಾಗೂ ಜಿಲ್ಲಾ ಚುನಾವಣಾ ಶಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular