ಕೋಲಾರ: ನರೇಗಾ ಯೋಜನೆಯಡಿಯ ಕಾಮಗಾರಿಗಳ ಬಿಲ್ ಮಂಜೂರು ಮಾಡಲು 2ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಕೋಲಾರ ಜಿಲ್ಲಾ ಪಂಚಾಯತ್‌ನ ನರೇಗಾ ವಿಭಾಗದ ಜೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇಂಜಿನಿಯರ್ ಕೃಷ್ಣಮೂರ್ತಿ ಹಾಗೂ ಅವರ ಸಹಾಯಕ ಹುಸೇನ್ ಅಲಿ ಲೋಕಾಯುಕ್ತ ದಾಳಿಯಲ್ಲಿ ಬಂಧನಕ್ಕೊಳಗಾದವರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದ ಗುತ್ತಿಗೆದಾರ ಕೃಷ್ಣಮೂರ್ತಿ ಅವರು ನರೇಗಾ ಯೋಜನೆಯಡಿ ನೆರವೇರಿಸಿದ್ದ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಇಂಜಿನಿಯರ್ ಕೃಷ್ಣಮೂರ್ತಿ ಹಾಗೂ ಸಹಾಯಕ ಹುಸೇನ್ ಅಲಿ ಬರೋಬ್ಬರಿ 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಗುತ್ತಿಗೆದಾರ ಕೃಷ್ಣಮೂರ್ತಿಯವರು ಈ ಕುರಿತು ಕೋಲಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆದಾರನಿಂದ ಮುಂಗಡವಾಗಿ 2 ಲಕ್ಷ ರೂಪಾಯಿ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಹಣದ ಸಮೇತ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

